ನವದೆಹಲಿ: 2025-26 ಹಣಕಾಸು ವರ್ಷದಲ್ಲಿ ವಾರ್ಷಿಕ 6.3-6.8% ದರದಲ್ಲಿ ಜಿಡಿಪಿ ಬೆಳವಣಿಗೆಯಾಬಹುದು ಎಂದು ಆರ್ಥಿಕ ಸಮೀಕ್ಷೆ (Economic Survey) ತಿಳಿಸಿದೆ.
ಲೋಕಸಭೆಯಲ್ಲಿ ಇಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು 2024-25ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು.
ದೇಶದ ಆರ್ಥಿಕತೆಯೆ ಹೇಗಿದೆ? ಯಾವ ಕ್ಷೇತ್ರಗಳ ಬೆಳವಣಿಗೆ ಎಷ್ಟಿದೆ? ಇತ್ಯಾದಿ ಎಲ್ಲಾ ವಿಚಾರಗಳನ್ನು ಒಳಗೊಂಡಿರುವ ಆರ್ಥಿಕ ಲೆಕ್ಕಾಚಾರವನ್ನು ಕೇಂದ್ರ ಬಜೆಟ್‌ಗೆ (Union Budget) ಮುಂಚಿತವಾಗಿ ಸರ್ಕಾರವು ಪ್ರಸ್ತುತಪಡಿಸುವ ವಾರ್ಷಿಕ ದಾಖಲೆಯನ್ನು ಆರ್ಥಿಕ ಸಮೀಕ್ಷೆ ಎಂದು ಕರೆಯಲಾಗುತ್ತದೆ.
ಆರ್ಥಿಕ ಸಮೀಕ್ಷೆಯಲ್ಲಿ ಏನಿದೆ?
ವಾಣಿಜ್ಯ ಬ್ಯಾಂಕ್‌ಗಳ ಒಟ್ಟು ಅನುತ್ಪಾದಕ ಆಸ್ತಿಗಳ (GNPA) ಅನುಪಾತದಲ್ಲಿ ಸ್ಥಿರವಾದ ಕುಸಿತವಾಗಿದೆ. ನಿಗದಿತ ವಾಣಿಜ್ಯ ಬ್ಯಾಂಕ್‌ಗಳ ಒಟ್ಟು ಅನುತ್ಪಾದಕ ಆಸ್ತಿಗಳ ಅನುಪಾತವು 2018ರ ಹಣಕಾಸು ವರ್ಷದಲ್ಲಿದ್ದ ಗರಿಷ್ಠ ಮಟ್ಟದಿಂದ ಸೆಪ್ಟೆಂಬರ್ 2024 ರ ಅಂತ್ಯದ ವೇಳೆಗೆ 2.6% ರಷ್ಟು ಕಡಿಮೆಯಾಗಿದೆ.
ಭಾರತದ ವಿಮಾ ಮಾರುಕಟ್ಟೆ ಬೆಳವಣಿಗೆಯಾಗುತ್ತಿದೆ. 2024ರ ಹಣಕಾಸು ವರ್ಷದಲ್ಲಿ ಒಟ್ಟು ವಿಮಾ ಪ್ರೀಮಿಯಂಗಳು 7.7% ರಷ್ಟು ಬೆಳೆದು 11.2 ಲಕ್ಷ ಕೋಟಿ ರೂ. ತಲುಪಿದೆ. ಪಿಂಚಣಿ ವಲಯವು ಸಹ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಸೆಪ್ಟೆಂಬರ್ 2024 ರ ಹೊತ್ತಿಗೆ ಒಟ್ಟು ಪಿಂಚಣಿ ಚಂದಾದಾರರ ಸಂಖ್ಯೆ 16% ರಷ್ಟು (YoY) ಬೆಳೆದಿದೆ.
ವಿದೇಶಿ ಬಂಡವಾಳ ಹೂಡಿಕೆ ಏರಿಕೆಯಾಗಲಿದೆ 2024 ಮೊದಲ 8 ತಿಂಗಳಿನಲ್ಲಿ 47.2 ಶತಕೋಟಿ ಡಾಲರ್ ಹೂಡಿಕೆಯಾಗಿದ್ದರೆ 2025 ರಲ್ಲಿ ಇದು 55.6 ಶತಕೋಟಿ ಡಾಲರ್‌ಗೆ ಏರಿಕೆಯಾಗಬಹುದು.
ಒಟ್ಟಾರೆ ರಫ್ತುಗಳು (ಮರ್ಚಂಡೈಸ್ + ಸೇವೆಗಳು) ಮೊದಲ ಒಂಬತ್ತು ತಿಂಗಳಲ್ಲಿ ಸ್ಥಿರವಾಗಿ ಬೆಳೆದಿದ್ದು 6% ವಾರ್ಷಿಕ ಬೆಳವಣಿಗೆಯನ್ನು ಕಂಡಿದೆ.
ಮುಂದಿನ ದಶಕದ ಭಾರತದ ಬೆಳವಣಿಗೆಯ ಯೋಜನೆಗಳಿಗೆ ಮೂಲಸೌಕರ್ಯದಲ್ಲಿ ದೊಡ್ಡ ಹೂಡಿಕೆಯ ಅಗತ್ಯವಿದೆ ಎಂದು ಸಮೀಕ್ಷೆಯು ಒತ್ತಿಹೇಳಿದೆ. 2020 ರಿಂದ 2024 ರವರೆಗೆ ಕೇಂದ್ರ ಸರ್ಕಾರದ ಪ್ರಮುಖ ಮೂಲಸೌಕರ್ಯ ವಲಯಗಳ ಮೇಲಿನ ಬಂಡವಾಳ ವೆಚ್ಚವು 38.8% ರಷ್ಟು ಏರಿಕೆಯಾಗಿದೆ.
ಸರ್ಕಾರದ ವಿವಿಧ ಉಪಕ್ರಮಗಳು ಮತ್ತು ಹಣಕಾಸು ನೀತಿ ಕ್ರಮಗಳಿಂದಾಗಿ ಚಿಲ್ಲರೆ ಹಣದುಬ್ಬರವು 2024 ರ ಹಣಕಾಸು ವರ್ಷದಲ್ಲಿ 5.4% ರಿಂದ ಏಪ್ರಿಲ್-ಡಿಸೆಂಬರ್ 2024 ರ ಅವಧಿಯಲ್ಲಿ 4.9% ಕ್ಕೆ ಇಳಿದಿದೆ.