ಚಿತ್ರದುರ್ಗ: ಕೊರೊನಾ ವೈರಸ್ ಸೋಂಕು ಹರಡದಂತೆ ಸಾರ್ವಜನಿಕರ ಹಿತದೃಷ್ಟಿಯಿಂದ ಮುಂಜಾಗ್ರತೆ ಕ್ರಮವಾಗಿ ಚಿತ್ರದುರ್ಗ ಜಿಲ್ಲಾದ್ಯಂತ ಸಂತೆ, ಜಾತ್ರೆ, ಸಮಾವೇಶ, ಮೆರವಣಿಗೆ, ಸಮ್ಮೇಳನ, ಕ್ರೀಡಾಕೂಟ ಹಾಗೂ ಯಾವುದೇ ಧಾರ್ಮಿಕ ಸಮಾರಂಭ ನಡೆಸದಂತೆ ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯ ಮೇ 03ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸಿಆರ್‌ಪಿಸಿ 1973ರ ಕಲಂ 144ರ ಮೇರೆಗೆ ಏಪ್ರಿಲ್ 14ರ ಮಧ್ಯರಾತ್ರಿ 12 ಗಂಟೆಯಿಂದ ಮೇ 03ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ 05ಕ್ಕೂ ಹೆಚ್ಚು ಜನ ಸೇರದಂತೆ ನಿಷೇಧಿಸಿ ಡಿಸಿ ಆದೇಶಿಸಿದ್ದಾರೆ. ಸಾರ್ವಜನಿಕರಿಗೆ ಅಗತ್ಯವಿರುವ ವಸ್ತುಗಳು, ಆಹಾರ ಸಾಮಗ್ರಿಗಳ ಪೂರೈಕೆ, ತುರ್ತು ಆರೋಗ್ಯ ಸೇವೆ, ಅಗ್ನಿಶಾಮಕ ಸೇವೆ, ಶವಸಂಸ್ಕಾರ ಇನ್ನಿತರೆ ಅಗತ್ಯ ಸೇವೆಗಳ ಸೌಲಭ್ಯ ಇರಲಿದೆ.

ಹೆಚ್ಚು ಜನರು ಬಳಸುವ ಈಜುಕೊಳ, ಜಿಮ್, ಬೇಸಿಗೆ ಶಿಬಿರ ಮುಂತಾದವುಗಳನ್ನು ಮುಚ್ಚಬೇಕು. ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಇನ್ನಿತರೆ ಜನಸಂದಣಿ ಸ್ಥಳಗಳಲ್ಲಿ ಆಹಾರ ಪದಾರ್ಥಗಳನ್ನು ಪಾರ್ಸೆಲ್ ಮೂಲಕ ಮಾತ್ರ ನೀಡಬೇಕು. ಶಾಲೆ, ಕಾಲೇಜು, ವಿಶ್ವವಿದ್ಯಾಲಯ, ಕೋಚಿಂಗ್ ಸೆಂಟರ್ ಗಳನ್ನು ಮುಚ್ಚಬೇಕು. ಜಿಲ್ಲೆಯಲ್ಲಿ ಎಲ್ಲರೂ ಈ ಸೂಚನೆ ಹಾಗೂ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದೇಶ ಉಲ್ಲಂಘಿಸುವವರ ವಿರುದ್ಧ ಐಪಿಸಿ ಸೆಕ್ಷನ್ 188ರ ಅನ್ವಯ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.


