ಬೆಂಗಳೂರು: ಕೊರೊನಾ ಮಹಾಮಾರಿ ತೊಲಗುವ ತನಕ ಉಳ್ಳವರು ಬಡವರಿಗೆ ನೆರವು ನೀಡಿ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ. ಗೋಪಾಲಯ್ಯ ಮನವಿ ಮಾಡಿದರು.
ಬೆಂಗಳೂರು ಹೊರವಲಯ ಟಿ. ದಾಸರಹಳ್ಳಿಯ ಚೊಕ್ಕಸಂದ್ರ ಮುಖ್ಯ ರಸ್ತೆಯಲ್ಲಿ ಪಾಲಿಕೆ ಸದಸ್ಯೆ ಸರ್ವಮಂಗಳ, ಸಿ.ಎಂ ನಾಗರಾಜು ಹಾಗೂ ಸೆಮಿ ಲ್ಯಾಬ್ ಕಂಪನಿ ವತಿಯಿಂದ ಬಡವರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಗೋಪಾಲಯ್ಯ ಅವರು ಚಾಲನೆ ನೀಡಿದರು. ಬಳಿಕ ಈ ಬಗ್ಗೆ ಮಾತನಾಡಿದ ಅವರು, ಪಡಿತರ ಚೀಟಿದಾರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ದಿನಸಿ ವಿತರಿಸುತ್ತಿವೆ. ಕಡು ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಬಿಜೆಪಿ ಜನಪ್ರತಿನಿಧಿಗಳು ಹಾಗೂ ಮುಖಂಡರು ನೆರವು ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಕೊರೊನಾ ಇರುವವರೆಗೆ ಜನಸೇವೆ ಮುಂದುವರೆಸುತ್ತೇವೆ ಎಂದರು. ಅಲ್ಲದೆ ಹೊರ ಜಿಲ್ಲೆಯ ಹಾಗೂ ಹೊರ ತಾಲೂಕಿನ ಎಲ್ಲಾ ಕುಟುಂಬಗಳಿಗೆ ಹತ್ತಿರದ ನ್ಯಾಯ ಬೆಲೆ ಅಂಗಡಿಯವರು ದಿನಸಿ ವಿತರಣೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
Advertisement
Advertisement
ನಂತರ ಟಿ. ದಾಸರಹಳ್ಳಿಯ ಮಾಜಿ ಶಾಸಕ ಮುನಿರಾಜು ಮಾತನಾಡಿ, ಸಂಕಷ್ಟದ ಸಮಯದಲ್ಲಿ ಸಂತ್ರಸ್ತರ ನೆರವಿಗೆ ಜನಪ್ರತಿನಿಧಿಗಳೊಂದಿಗೆ ಸಂಘ ಸಂಸ್ಥೆಗಳು ಕೈಜೋಡಿಸಿದೆ. ಇದರಿಂದ ಅಸಹಾಯಕರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಸೆಮಿ ಲ್ಯಾಬ್ ಕಾರ್ಖಾನೆ ಮಾಲೀಕ ಡಾ. ಮಹಮದ್ ಮಜೀದ್, ಸಿಇಒ ನೀರಜಾ ಶೆಟ್ಟಿ, ಎಂ.ಸಿ ಮುನಿರಾಜು, ನಿಸರ್ಗ ಕೆಂಪರಾಜು, ಕೆ. ಮುನಿರಾಜು, ಜಗದೀಶ್, ಮಂಜುನಾಥ್ ಮೊದಲಾದವರು ಭಾಗಿಯಾಗಿದ್ದರು.