– ಲಾಕ್‍ಡೌನ್ ನಡುವೆ ವಿದ್ಯಾರ್ಥಿಯ ಖತರ್ನಾಕ್ ಪ್ಲಾನ್
ಮಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ನಗರದ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ್ತವ್ಯ ಇರುವವರು ಬಿಟ್ಟು ಹೊರಗಿನಿಂದ ಬರುವವರಿಗೆ ಪ್ರವೇಶಕ್ಕೆ ಕೆಲವು ಕಡೆ ನಿರ್ಬಂಧ ವಿಧಿಸಲಾಗುತ್ತಿದೆ. ಆದರೆ ವಿದ್ಯಾರ್ಥಿಯೊಬ್ಬ ಸೂಟ್‍ಕೇಸ್‍ನೊಳಗೆ ಗೆಳೆಯನನ್ನ ಸಾಗಿಸುವಾಗ ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಮಂಗಳೂರಿನ ಆರ್ಯ ಸಮಾಜದ ವಸತಿ ಸಮುಚ್ಚಯದಲ್ಲಿ ನಡೆದಿದೆ. ಆರ್ಯ ಸಮಾಜದ ವಸತಿ ಸಮುಚ್ಚಯದಲ್ಲಿ ವಿದ್ಯಾರ್ಥಿಯೊಬ್ಬ ಬಾಡಿಗೆಗೆ ವಾಸವಿದ್ದನು. ಲಾಕ್‍ಡೌನ್ ಪರಿಣಾಮ ವಿದ್ಯಾರ್ಥಿ ಬೋರ್ ಆಗುತ್ತಿದೆ ಎಂದು ತನ್ನ ಗೆಳೆಯನನ್ನು ಕರೆದುಕೊಂಡು ಬರುವುದಾಗಿ ಸಮುಚ್ಚಯದ ಅಸೋಸಿಯೇಷನ್ ಬಳಿ ಹೇಳಿದ್ದನು. ಆದರೆ ಅಸೋಸಿಯೇಷನ್ ಮಾತ್ರ ನಿಯಮದಂತೆ ನಿರಾಕರಣೆ ಮಾಡಿತ್ತು.
Advertisement
Advertisement
ಯುವಕ ಹೇಗಾದರೂ ಮಾಡಿ ಗೆಳೆಯನನ್ನು ಕರೆದುಕೊಂಡು ಬರಬೇಕು ಅಂತ ಇಂದು ಹೊಸ ಉಪಾಯ ಮಾಡಿದ್ದಾರೆ. ಅದರಂತೆಯೇ ಗೆಳೆಯನನ್ನು ಸೂಟ್ ಕೇಸ್‍ನಲ್ಲಿ ತುಂಬಿಸಿ ಕರೆ ತರುವ ಪ್ರಯತ್ನ ಮಾಡಿದ್ದಾನೆ. ಆದರೆ ಕರೆ ತರುವಾಗ ಸೂಟ್‍ಕೇಸ್‍ನಲ್ಲಿ ಸಂಚಲನ ಕಂಡು ಬಂದಾಗ ಸಮುಚ್ಚಯದವರು ಸೂಟ್‍ಕೇಸ್ ತೆರೆಯುವಂತೆ ಹೇಳಿದ್ದಾರೆ. ಆಗ ವಿದ್ಯಾರ್ಥಿ ಗಾಬರಿಯಾಗಿದ್ದಾನೆ.
Advertisement
ಕೊನೆಗೆ ಸಮುಚ್ಚಯದವರ ಒತ್ತಾಯದ ಮೇರೆಗೆ ಸೂಟ್‍ಕೇಸ್ ತೆರೆದಿದ್ದಾನೆ. ಅದರೊಳಗೆ ಗೆಳೆಯ ಇರುವ ಸತ್ಯಾಂಶ ಬಹಿರಂಗವಾಗಿದೆ. ಕೂಡಲೇ ಕದ್ರಿ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದು ಕದ್ರಿ ಪೊಲೀಸರು ಬಂದು ಇಬ್ಬರನ್ನೂ ಸೂಟ್‍ಕೇಸ್ ಸಮೇತ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದ್ದಾರೆ.