ಕೊಪ್ಪಳ: ಐತಿಹಾಸಿಕ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯದಲ್ಲಿ ದೇಶದ ಮೊದಲ ಅಂತರಾಷ್ಟ್ರೀಯ ಯೋಗ ವಿಶ್ವವಿದ್ಯಾನಿಲಯ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಲಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ, ರಂಗಾಪುರ, ಹನುಮನಹಳ್ಳಿ, ಸಣಾಪುರ ಪ್ರದೇಶದಲ್ಲಿ ಅಧಿಕಾರಿಗಳೊಂದಿಗೆ ಆಗಮಿಸಿದ ಕೊಪ್ಪಳ ಸಂಸದ ಸಂಗಣ್ಣ ಕರಡಿ ಮತ್ತು ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಸೂಕ್ತ ಸ್ಥಳಕ್ಕಾಗಿ ಪರಿಶೀಲನೆ ನೆಡಸಿದ್ದಾರೆ. ಈಗಾಗಲೇ ಕೇಂದ್ರ ಸಚಿವರಾದ ಶ್ರೀಪಾದ ಯಸ್ಸೊ ಅವರ ಜೊತೆ ಒಂದು ಸುತ್ತಿನ ಚರ್ಚೆ ನಡೆಸಲಾಗಿದ್ದು, ಸ್ಥಳ ಪರಿಶೀಲನೆ ನಂತರ ಇನ್ನೊಂದು ಬಾರಿ ಕೇಂದ್ರ ತಂಡದ ಜೊತೆ ಆಗಮಿಸಿ ಸ್ಥಳವನ್ನು ಅಂತಿಮಗೊಳಿಸಲಾಗುತ್ತದೆ ಎನ್ನಲಾಗಿದೆ.
ಯೋಗ ವಿವಿ ನಿರ್ಮಿಸಲು ರಾಜ್ಯವನ್ನು ಆಯ್ಕೆ ಮಾಡುವುದಕ್ಕೆ ಕಾರಣವಿದೆ. ವಿವಿ ನಿರ್ಮಾಣಕ್ಕೆ ಪರಿಶೀಲಿಸಿರುವ ಸ್ಥಳವು ವಿಶ್ವ ವಿಖ್ಯಾತ ಹಂಪಿಗೆ ಹತ್ತಿರವಿದೆ. ಇದರ ಜೊತೆಗೆ ಇಲ್ಲಿ ದಟ್ಟವಾದ ಗುಡ್ಡಗಾಡು ಪ್ರದೇಶ ಮತ್ತು ತುಂಗಭದ್ರಾ ನದಿಯೂ ಸಹ ಹರಿಯುತ್ತೆ. ಆದ್ದರಿಂದ ಯೋಗ ಮಾಡುವುದಕ್ಕೆ ಇಂತಹ ಪ್ರಕೃತಿ ಸೌಂದರ್ಯ ಇರುವಂತ ಸ್ಥಳಗಳು ಸೂಕ್ತ ಎನ್ನುವ ಕಾರಣಕ್ಕೆ ಕೊಪ್ಪಳದಲ್ಲಿ ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ.
ಇಲ್ಲಿ 340 ಎಕ್ರೆ ಸರ್ಕಾರಿ ಭೂಮಿ ಮತ್ತು 200 ಎಕ್ರೆ ಅರಣ್ಯ ಪ್ರದೇಶವಿದೆ. ಯೋಗ ವಿವಿಗೆ 200 ಎಕ್ರೆ ಪ್ರದೇಶ ಬೇಕಾಗಿದ್ದು, ಮೊದಲ ಹಂತದಲ್ಲಿ 100 ಎಕ್ರೆ ಪ್ರದೇಶವನ್ನು ಗುರುತಿಸಲು ತೀರ್ಮಾನಿಸಲಾಗಿದೆ. ಎಲ್ಲಾ ಅಂದುಕೊಂಡತೆ ಆದರೆ ಶೀಘ್ರದಲ್ಲೇ ಹನುಮ ಹುಟ್ಟಿದ ನಾಡಿನಲ್ಲಿ ದೇಶದ ಮೊದಲ ಅಂತರಾಷ್ಟ್ರೀಯ ಯೋಗ ವಿಶ್ವವಿದ್ಯಾನಿಲಯ ತಲೆ ಎತ್ತಲಿದೆ.