ಬೆಂಗಳೂರು: ಬಹು ಚರ್ಚಿತ ಸಾಲ ಮನ್ನಾ ಯೋಜನೆಯಿಂದ 1.10 ಲಕ್ಷ ರೈತರಿಗೆ ಕೊಕ್ ನೀಡಲಾಗಿದೆ. 1.10 ಲಕ್ಷ ರೈತರನ್ನು ಸಾಲ ಮನ್ನಾ ಯೋಜನೆಯಿಂದ ಕೈ ಬಿಡಲು ಸರ್ಕಾರ ನಿರ್ಧಾರ ಮಾಡಿದೆ. ಇದಕ್ಕೆ ಕಾರಣ ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಭೂ ದಾಖಲೆಗಳಲ್ಲಿನ ಲೋಪ.
ಸಾಲ ಮನ್ನಾ ಯೋಜನೆಗಾಗಿ ರೈತರು ಕಡ್ಡಾಯವಾಗಿ ಈ ಮೂರು ದಾಖಲೆಗಳನ್ನು ಸಲ್ಲಿಸಲೇಬೇಕಾಗಿತ್ತು. ದಾಖಲೆಗಳಲ್ಲಿನ ಲೋಪದೋಷದ ಕಾರಣ ಸಾಲಮನ್ನಾ ಯೋಜನೆಯಿಂದ ಕೈಬಿಡಲಾಗಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳ ಸ್ಪಷ್ಟನೆಯಾಗಿದೆ.
Advertisement
Advertisement
ರೈತರನ್ನು ಜನವರಿಯೊಳಗೆ ಸಂಪರ್ಕಿಸಿ ಅರ್ಹರಾಗಿದ್ದರೆ ಅವರನ್ನು ಪರಿಗಣಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ನೀಡಿದ್ದ ಗಡುವು ಮುಕ್ತಾಯ ಹಿನ್ನೆಲೆ 1.10 ಲಕ್ಷ ರೈತರಿಗೆ ಕೊಕ್ ನೀಡಲಾಗಿದೆ. 2019-20ನೇ ಆರ್ಥಿಕ ವರ್ಷದೊಳಗೆ ಸಾಲಮನ್ನಾ ಯೋಜನೆಗೆ ಇತಿಶ್ರೀ ಹಾಡಲು ಸರ್ಕಾರ ನಿರ್ಧರಿಸಿದೆ.
Advertisement
ಸರ್ಕಾರದ ಅಂಕಿ ಅಂಶದ ಪ್ರಕಾರ ಸಾಲಮನ್ನಾ ಯೋಜನೆಯಡಿ ಈಗಾಗಲೇ ರಾಷ್ಟ್ರೀಯ ಬ್ಯಾಂಕುಗಳಿಗೆ ಸುಮಾರು 6,859 ಕೋಟಿ ರೂ.ಯನ್ನು ಪಾವತಿಸಲಾಗಿದೆ. ಈವರೆಗೆ 9,16,592 ರೈತರ ಖಾತೆಗಳಿಗೆ ಸಾಲದ ಹಣ ಜಮಾ ಆಗಿದೆ. ಫೆಬ್ರವರಿ 14ಕ್ಕೆ ಕೊನೆಯ ಕಂತನ್ನು ಬ್ಯಾಂಕ್ ಗಳಿಗೆ ಸರ್ಕಾರ ಪಾವತಿ ಮಾಡಿದೆ. ಸಹಕಾರ ಬ್ಯಾಂಕುಗಳಿಗೆ ಈವರೆಗೆ ಒಟ್ಟು 7,434 ಕೋಟಿ ರೂ ಪಾವತಿ ಮಾಡಲಾಗಿದೆ.
Advertisement
ಏಪ್ರಿಲ್ 2009ರಿಂದ ಡಿಸೆಂಬರ್ 2017ರ ವರೆಗೆ ಬೆಳೆ ಸಾಲ ಪಡೆದ ರೈತರ ಸಾಲವನ್ನು ಮನ್ನಾ ಮಾಡಲು ಅಂದಿನ ಸಿಎಂ ಕುಮಾರಸ್ವಾಮಿ ನಿರ್ಧರಿಸಿದ್ದರು. ರಾಷ್ಟ್ರೀಕೃತ ಬ್ಯಾಂಕ್ ಗಳ ಒಂದು ಲಕ್ಷದ ವರೆಗಿನ ಬೆಳೆ ಸಾಲ, ಸಹಕಾರ ಬ್ಯಾಂಕಿನ 1 ಲಕ್ಷ ರೂ. ಸಾಲಮನ್ನಾ ಮಾಡಲು ನಿರ್ಧರಿಸಿದ್ದರು. ಜೊತೆಗೆ ಚಾಲ್ತಿ ಬೆಳೆ ಸಾಲ ಮಾಡಿದ್ದ ರೈತರಿಗೆ 25,000 ರೂ. ಪ್ರೋತ್ಸಾಹ ಕೊಡುವುದಾಗಿ ಘೋಷಿಸಿದ್ದರು. ಸುಮಾರು 42 ಲಕ್ಷ ರೈತರ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡುವುದಾಗಿ ಘೋಷಿಸಲಾಗಿತ್ತು. ಅಂತಿಮವಾಗಿ ಸಾಲಮನ್ನಾ ಯೋಜನೆಯ ಲಾಭ ಪಡೆದ ರೈತರ ಸಂಖ್ಯೆ 25.17 ಲಕ್ಷ ಇತ್ತು. ಸುಮಾರು 46,000 ಕೋಟಿ ರೂ. ಬೆಳೆ ಸಾಲಮನ್ನಾ ಎಂದಿದ್ದ ಯೋಜನೆ ಇದೀಗ ಕೇವಲ 14,293 ಕೋಟಿ ರೂ.ಗೆ ಮಾತ್ರ ಸೀಮಿತವಾಗಿದೆ.