ಕೊಪ್ಪಳ: ಭೀಕರ ಬರಕ್ಕೆ ತುತ್ತಾದ ರೈತರು ಮಾಡಿದ ಸಾಲ ಹೇಗೇ ತೀರಿಸೋದಪ್ಪ ಎಂದು ತಲೆ ಮೇಲೆ ಕೈ ಹೊತ್ತು ಕೂತಿದ್ರೆ, ಕೆಲ ಖದೀಮರು ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ರಾಷ್ಟ್ರೀಕೃತ ಬ್ಯಾಂಕ್ ನಲ್ಲೇ ಲಕ್ಷಾಂತರ ರೂಪಾಯಿ ಸಾಲ ಪಡೆಯುತ್ತಿದ್ದಾರೆ. ಈ ಮೂಲಕ ರೈತರಿಗೆ ವಂಚಿಸಿದ್ದಲ್ಲದೇ ಸರ್ಕಾರಕ್ಕೂ ಮೋಸ ಮಾಡುವ ದಂಧೆ ಹಿಂದುಳಿದ ಜಿಲ್ಲೆ ಎಂದೇ ಹಣೇ ಪಟ್ಟಿ ಹೊತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿದೆ.
ಭತ್ತದ ಕಣಜ ಎಂಬ ಖ್ಯಾತಿಯ ಗಂಗಾವತಿ ತಾಲೂಕಿನಲ್ಲಿ ಲೋನ್ ಮಾಫಿಯಾ ಹೆಚ್ಚು ನಡೆಯುತ್ತಿದ್ದು, ಕೆಲ ಪ್ರಕರಣ ಬೆಳಕಿಗೆ ಬಂದಿವೆ. ಗಂಗಾವತಿ ತಾಲೂಕಿನ ಸಿದ್ದಾಪುರ ಗ್ರಾಮದ ನಿವಾಸಿ ಮಹಮ್ಮದ್ ಅಬ್ದುಲ್ ಮಾಜೀದ್ ಎಂಬಾತ ತನ್ನ ಹೆಸರಿನಲ್ಲಿ 1 ಗುಂಟೆ 20 ಎಕರೆ ಜಮೀನಿದ್ದು, ಅದನ್ನೆ 21 ಎಕರೆ 20 ಗುಂಟೆ ಎಂದು ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡು ಒಂದೇ ತಿಂಗಳಲ್ಲಿ ಮೂರು ಬ್ಯಾಂಕ್ ಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾನೆ. ಗಂಗಾವತಿ ನಗರದ ಎಸ್‍ಬಿಎಚ್ ಬ್ಯಾಂಕ್ ನಲ್ಲಿ ಮೂರು ತಿಂಗಳಲ್ಲಿ ಮೂರು ಭಾರಿ ಸಾಲ ಮಾಡಿದ್ದು ಅದರ ಮೊತ್ತ 22 ಲಕ್ಷ ರೂ. ಇದೆ. ಅದರಂತೆ ಸಿದ್ದಾಪುರ ಶಾಖೆಯ ಕೃಷ್ಣಾ ಪ್ರಗತಿ ಗ್ರಾಮೀಣ ಬ್ಯಾಂಕ್ ನಲ್ಲಿ 15 ಲಕ್ಷ ರೂಪಾಯಿ ಸಾಲ ಮಾಡಿದ್ದಾನೆ. ಒಬ್ಬ ವ್ಯಕ್ತಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಇಷ್ಟೊಂದು ಸಾಲ ಮಾಡಿದ್ದಾನೆಂದ್ರೆ ಇದಕ್ಕೆ ಬ್ಯಾಂಕಿನ ಸಿಬ್ಬಂದಿ ಸಾಥ್ ಕೊಟ್ಟಿರುವುದು ಕಾಣುತ್ತದೆ. ಈ ಬಗ್ಗೆ ಸ್ಥಳೀಯರಾದ ಮೆಹೆಬೂಬ್ ಸಾಬ್ ಎಂಬವರು ಬ್ಯಾಂಕ್ ಗಳಿಗೆ ದೂರು ನೀಡಿದ್ರು ಯಾವುದೇ ಪ್ರಯೋಜನವಾಗಿಲ್ಲ.
Advertisement
Advertisement
ಗಂಗಾವತಿ ತಾಲೂಕಿನಾದ್ಯಾಂತ ಲೋನ್ ಮಾಫಿಯಾ ಜೋರಾಗಿದೆ. ಮಾಫಿಯಾದಲ್ಲಿ ಬ್ಯಾಂಕ್ ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ನಕಲಿ ದಾಖಲೆ ಸೃಷ್ಟಿ ಮಾಡುವವರು ಶಾಮೀಲಾಗಿದ್ದಾರೆ. ಎಂ.ಎ.ಮನನ್ ಎಂಬಾತ ನಕಲಿ ದಾಖಲೆ ಸೃಷ್ಟಿ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಬಳಿ ಕೇಳೋಕೆ ಹೋದ್ರೆ ಕಕ್ಕಾಬಿಕ್ಕಿಯಾದ ಅಧಿಕಾರಿಗಳು ನಾವೇನು ಮಾಡಿಲ್ಲ ಎಂದು ಕೇಳಿದವರಿಗೇ ಜೋರು ಮಾಡಿ ಹೇಳಿಕೆ ನೀಡಲು ನಿರಾಕರಿಸುತ್ತಿದ್ದಾರೆ.
Advertisement
ಬ್ಯಾಂಕ್ ಗಳು ಸಾಲ ಕೊಡುವ ಮುನ್ನ ಎಲ್ಲಾ ರೀತಿಯ ಪೂರ್ವಾ ಪರ ಯೋಚಿಸಿ ಸಾಲ ನೀಡಬೇಕು. ಜನ ಸಾಮಾನ್ಯರ ಪ್ರಕರಣದಲ್ಲಿ ಅಗತ್ಯಕ್ಕೂ ಹೆಚ್ಚು ದಾಖಲೆಗಳನ್ನು ಎಲ್ಲ ಮ್ಯಾನೇಜರ್ ಗಳೂ ಕೇಳುತ್ತಾರೆ. ಗಂಗಾವತಿಯಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಯಾರೊಬ್ಬರಿಗೂ ಮಾಹಿತಿಯೇ ಇಲ್ಲ ಎಂಬುವುದು ಸಾಕಷ್ಟು ಅನುಮಾನ ಹುಟ್ಟು ಹಾಕಿದೆ. ಬದಲಾಗಿ ಬ್ಯಾಂಕ್ ಅಧಿಕಾರಿಗಳು ಜೇಬು ತುಂಬಿಸುಕೊಳ್ಳುವ ತಂತ್ರ ರೂಪಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಅಗತ್ಯವಿದೆ.
Advertisement