ನವದೆಹಲಿ: ಭಾರತ ಹಾಗೂ ರಷ್ಯಾ ನಡುವಿನ ಸಂಬಂಧ ಸುಧಾರಣೆ ಮತ್ತು ವ್ಯೂಹಾತ್ಮಕ ಪಾಲುದಾರಿಕೆ ಮಹತ್ವದ ಪಾತ್ರವಹಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಷ್ಯಾ ಸರ್ಕಾರ ಅತ್ಯುನ್ನತ ನಾಗರಿಕ ಪುರಸ್ಕಾರವಾದ `ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೋಸ್ಟೆಲ್’ ನೀಡಿ ಗೌರವಿಸಿದೆ.
ಮೋದಿ ಅವರ ಅಸಾಮಾನ್ಯ ಕೊಡುಗೆಯ ಫಲವೆಂಬಂತೆ ಭಾರತ ಮತ್ತು ರಷ್ಯಾ ನಡುವಿನ ವಿಶೇಷ ಮತ್ತು ವ್ಯವಹಾರ ದಕ್ಷ ಪಾಲುದಾರಿಕೆ ಅತ್ಯುನ್ನತ ಮಟ್ಟಕ್ಕೆ ಏರಿದೆ. ಆದ್ದರಿಂದ ಅವರ ಈ ಪರಿಶ್ರಮವನ್ನು ಪರಿಗಣಿಸಿ ಈ ಶ್ರೇಷ್ಠ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ ಎಂದು ರಷ್ಯಾ ರಾಯಭಾರ ಕಚೇರಿ ತಿಳಿಸಿದೆ.
Advertisement
Advertisement
ಪ್ರಶಸ್ತಿ ಸಮಾರಂಭವನ್ನು ಸಾಮಾನ್ಯವಾಗಿ ಸೇಂಟ್ ಆಂಡ್ರ್ಯೂ ಹಾಲ್ ನಲ್ಲಿ ಆಯೋಜಿಸಲಾಗುತ್ತದೆ. 1698ರಲ್ಲಿ ರಷ್ಯಾ ಸಾಮ್ರಾಜ್ಯದಲ್ಲಿ ಅತ್ಯುನ್ನತ ಸಾಧನೆಗೈದ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿತ್ತು. ಬಳಿಕ ಸೋವಿಯತ್ ಆಡಳಿತ ಅವಧಿಯಲ್ಲಿ ಇದನ್ನು ನಿಲ್ಲಿಸಲಾಗಿತ್ತು. ಆದ್ರೆ 1998ರಲ್ಲಿ ಈ ಪ್ರಶಸ್ತಿ ಪುರಸ್ಕಾರವನ್ನು ಪುನಃ ಆರಂಭಿಸಲಾಯಿತು.
Advertisement
Advertisement
ಇದು ಮೋದಿ ಅವರ ಪರಿಶ್ರಮಕ್ಕೆ ಲಭಿಸಿರುವ ಏಳನೇ ವಿದೇಶಿ ಪುರಸ್ಕಾರವಾಗಿದೆ. `ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೋಸ್ಟೆಲ್’ ಪ್ರಶಸ್ತಿ ಪತ್ರಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಸಹಿ ಇರಲಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್, ಕಜಕಿಸ್ತಾನದ ಅಧ್ಯಕ್ಷ ನುರ್‍ಸುಲ್ತಾನ್ ನಜರ್ ಬಯೋವ್, ಅಜರ್‍ಬೈಜಾನ್ ಅಧ್ಯಕ್ಷ ಗೇಡರ್ ಅಲೀವ್ ಅವರಿಗೂ ಕೂಡ ಈ ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಮೋದಿಗೆ ಒಲಿದು ಬಂದ ವಿದೇಶಿ ಪುರಸ್ಕಾರಗಳು:
1. ಜಾಯೇದ್ ಮೆಡಲ್ ಆಫ್ ಯುಎಇ: ಭಾರತ-ಯುಎಇ ನಡುವೆ ರಚನಾತ್ಮಕ ಸಂಬಂಧ ಸುಧಾರಣೆಗೆ ಶ್ರಮಿಸಿದ್ದಕ್ಕೆ ಕಳೆದ ಏಪ್ರಿಲ್ 4ರಂದು ಈ ಪ್ರಶಸ್ತಿಯನ್ನು ಘೋಷನೆ ಮಾಡಲಾಗಿತ್ತು.
2. ಸಿಯೋಲ್ ಶಾಂತಿ ಪ್ರಶಸ್ತಿ 2018: ಶ್ರೀಮಂತರು ಮತ್ತು ಬಡವರ ನಡುವಿನ ಆರ್ಥಿಕ ಹಾಗೂ ಸಾಮಾಜಿಕ ಅಂತರ ತಗ್ಗಿಸಲು ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ಆರ್ಥಿಕ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ಮೋದಿ ಅವರಿಗೆ ದಕ್ಷಿಣ ಕೊರಿಯಾ ಸರ್ಕಾರ 2018ರ ಅಕ್ಟೋಬರ್ 24ರಂದು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
3. ಯುಎನ್ ಚಾಂಪಿಯಸ್ಸ್ ಆಫ್ ಅರ್ಥ್ ಅವಾರ್ಡ್ 2018: ವಿಶ್ವಸಂಸ್ಥೆಯ ಅತಿದೊಡ್ಡ ಪ್ರಶಸ್ತಿ ಎನಿಸಿಕೊಂಡಿರುವ ಚಾಂಪಿಯನ್ಸ್ ಆಫ್ ಅರ್ಥ್ ಪ್ರಶಸ್ತಿಯ ಗೌರವಕ್ಕೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಿದ್ದರು. ಈ ಗೌರವವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಅವರ ಜೊತೆ ಹಂಚಿಕೊಂಡಿದ್ದರು. ಪಾಲಿಸಿ ಆಫ್ ಲೀಡರ್ಶಿಪ್ ವಿಭಾಗದಲ್ಲಿ ಮೋದಿ ಅವರಿಗೆ ಈ ಗೌರವ ಸಿಕ್ಕಿತ್ತು. ಸೌರಶಕ್ತಿ ಬಳಕೆಗೆ ಉತ್ತೇಜನ ನೀಡುವ ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಕ್ಕಾಗಿ ಮೋದಿಗೆ ಅಕ್ಟೋಬರ್ 3ರಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೋ ಗುಟೆರೆಸ್ ಅವರು ಈ ಪ್ರಶಸ್ತಿ ನೀಡಿ ಗೌರವಿಸಿದ್ದರು.
4. ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಪ್ಯಾಲೆಸ್ತೀನ್: ಉಭಯ ದೇಶಗಳ ಸಂಬಂಧ ಸುಧಾರಣೆಗೆ ಮೋದಿ ಅವರು ಕೈಗೊಂಡ ಕ್ರಮಗಳನ್ನು ಮೆಚ್ಚಿ ಕಳೆದ ವರ್ಷದ ಫೆಬ್ರವರಿ 10 ರಂದು ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಈ ಪ್ರಶಸ್ತಿ ನೀಡಿ ಸನ್ಮಾನಿಸಿದ್ದರು.
5. ಅಮೀರ್ ಅಬ್ದುಲ್ಲಾ ಖಾನ್ ಅವಾರ್ಡ್ ಆಫ್ ಅಫಘಾನಿಸ್ತಾನ: 2016ರ ಜೂನ್‍ನಲ್ಲಿ ಮೋದಿ ಅವರು ಅಫ್ಘನ್-ಭಾರತ ಸ್ನೇಹಸೇತು ಅಣೆಕಟ್ಟೆ ಉದ್ಘಾಟನೆಗೆಂದು ಅಫಘಾನಿಸ್ತಾನಕ್ಕೆ ತೆರಳಿದ್ದಾಗ ಈ ಪುರಸ್ಕಾರವನ್ನು ಅಧ್ಯಕ್ಷ ಅಶ್ರಫ್ ಘನಿ ಪ್ರದಾನ ಮಾಡಿದ್ದರು.
6. ಕಿಂಗ್ ಅಬ್ದುಲ್ಲಾಜೀಜ್ ಸಾಶ್ ಅವಾರ್ಡ್ ಆಫ್ ಸೌದಿ ಅರೇಬಿಯಾ: ಇದು ಸೌದಿಯ ಅತ್ಯುನ್ನತ ನಾಗರಿಕ ಗೌರವವಾಗಿದ್ದು, ಪ್ರಧಾನಿ ಮೋದಿಗೆ 2016ರ ಏಪ್ರಿಲ್‍ನಲ್ಲಿ ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲಾಜೀಜ್ ಈ ಪ್ರಶಸ್ತಿ ಪ್ರದಾನ ಮಾಡಿದ್ದರು.