ನವದೆಹಲಿ: ಮದ್ಯ ನೀತಿಯನ್ನು ಬದಲಾಯಿಸಲು ಹೊರಟ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಈಗ ಸಿಬಿಐ ಬಲೆಗೆ ಬಿದ್ದಿದ್ದಾರೆ. ಮದ್ಯ ಮಾರಾಟದಿಂದ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಇಂದು ಮನೀಶ್ ಸಿಸೋಡಿಯಾ ನಿವಾಸದ ಮೇಲೆ ದಾಳಿ ಮಾಡಿದೆ.
ದೆಹಲಿ ಅಬಕಾರಿ ನೀತಿಯ ರಚನೆ ಹಾಗೂ ಅನುಷ್ಠಾನದಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ರಾಜಧಾನಿ ದೆಹಲಿ ಮತ್ತು ಏಳು ರಾಜ್ಯಗಳಲ್ಲಿನ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದೆ. ಮನೀಶ್ ಸಿಸೋಡಿಯಾ ಮಾಡಿದ ಒಂದು ನಿರ್ಧಾರದಿಂದಾಗಿ ಆಪ್ ಸರ್ಕಾರದ ಮೇಲೆ ಗಂಭೀರ ಭ್ರಷ್ಟಾಚಾರದ ಆರೋಪ ಬಂದಿದೆ. ಹೀಗಾಗಿ ಇಲ್ಲಿ ಯಾವಾಗ ಏನಾಯ್ತು? ಎಂಬುದರ ಬಗ್ಗೆ ಕಿರು ಮಾಹಿತಿಯನ್ನು ನೀಡಲಾಗಿದೆ.
Advertisement
Advertisement
ಏಪ್ರಿಲ್ 2021:
ಕೋವಿಡ್ 2ನೇ ಅಲೆ ಉತ್ತುಂಗದಲ್ಲಿದ್ದಾಗ ಮನೀಶ್ ಸಿಸೋಡಿಯಾ ಕ್ಯಾಬಿನೆಟ್ ಅನುಮೋದನೆ ಇಲ್ಲದೇ ಮದ್ಯದಂಗಡಿ ಟೆಂಡರ್‌ಗೆ ಅರ್ಜಿ ಸಲ್ಲಿಸಿದವರ 144.36 ಕೋಟಿ ಪರವಾನಗಿ ಶುಲ್ಕವನ್ನು ಮನ್ನಾ ಮಾಡಲು ಆದೇಶ ಹೊರಡಿಸುತ್ತಾರೆ.
Advertisement
ಮೇ 2021
ಈ ಮಹತ್ವದ ನಿರ್ಧಾರದ ಬಳಿಕ ಕೇಜ್ರಿವಾಲ್ ನೇತೃತ್ವದ ಕ್ಯಾಬಿನೆಟ್ ಸಭೆ ಕರೆದು ಅಬಕಾರಿ ನೀತಿಯಲ್ಲಿ ಬದಲಾವಣೆ ಮಾಡುತ್ತದೆ.
Advertisement
ಮೇ 2021
ಲೆಫ್ಟಿನೆಂಟ್ ಗವರ್ನರ್ ಅವರು ಕ್ಯಾಬಿನೆಟ್ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ದೆಹಲಿ ಸರ್ಕಾರ ತನ್ನ ನಿರ್ಧಾರವನ್ನು ಹಿಂದಕ್ಕೆ ಪಡೆಯುತ್ತದೆ. ಆದರೆ ಸಿಸೋಡಿಯಾ ಕೈಗೊಂಡ ನಿರ್ಧಾರ ಮುಂದುವರಿಯುತ್ತದೆ.
8 ಜುಲೈ 2022:
ದೆಹಲಿ ಮುಖ್ಯ ಕಾರ್ಯದರ್ಶಿ ಅವರು ಲೆಫ್ಟಿನೆಂಟ್ ಗವರ್ನರ್ ಬಳಿ ದೂರು ನೀಡುತ್ತಾರೆ. ಸಿಸೋಡಿಯಾ ನಿರ್ಧಾರದಿಂದ ಸರ್ಕಾರಕ್ಕೆ ಭಾರೀ ನಷ್ಟವಾಗಿದೆ. ವಿಸ್ಕಿ ಮತ್ತು ವೈನ್ ಮಾರಾಟ ಅನುಕ್ರಮವಾಗಿ ಶೇ.60 ಮತ್ತು ಶೇ.87ರಷ್ಟು ಏರಿಕೆ ಕಂಡಿದೆ. ಆದರೆ ಆದಾಯ ಶೇ.80 ರಷ್ಟು ಇಳಿಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸುತ್ತಾರೆ.
14 ಜುಲೈ 2022:
ಕೇಜ್ರಿವಾಲ್- ಸಿಸೋಡಿಯಾ ಅವರು ಲೆಫ್ಟಿನೆಂಟ್ ಗವರ್ನರ್ ಗಮನಕ್ಕೆ ತಾರದೇ ತುರ್ತು ಕ್ಯಾಬಿನೆಟ್ ಸಭೆಯನ್ನು ಕರೆಯುತ್ತಾರೆ. ಸಿಸೋಡಿಯಾ ಅಕ್ರಮವಾಗಿ ಹೊರಡಿಸಿದ ಆದೇಶವನ್ನು ಸಕ್ರಮ ಮಾಡಲು ಕ್ಯಾಬಿನೆಟ್‌ನಲ್ಲಿ ಪ್ರಯತ್ನ ಮಾಡಲಾಗುತ್ತದೆ.
22 ಜುಲೈ 2022:
ಅಕ್ರಮ ಮದ್ಯ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಲೆಫ್ಟಿನೆಂಟ್ ಗವರ್ನರ್ ಅವರು ಆದೇಶ ಹೊರಡಿಸುತ್ತಾರೆ.
30 ಜುಲೈ 2022:
ಕೇಜ್ರಿವಾಲ್ ಸರ್ಕಾರ ಈ ಹಿಂದೆ ಹೊರಡಿಸಿದ್ದ ಅಬಕಾರಿ ನೀತಿಯನ್ನು ಹಿಂದಕ್ಕೆ ಪಡೆಯುತ್ತದೆ.
ಆರೋಪ ಏನು?
ಕೊರೊನಾ ಸಮಯದಲ್ಲಿ ಕಿಕ್ ಬ್ಯಾಕ್ ಪಡೆಯಲೆಂದೇ ಮದ್ಯದಂಗಡಿ ಟೆಂಡರ್‌ಗೆ ಅರ್ಜಿ ಸಲ್ಲಿಸಿದವರ 144.36 ಕೋಟಿ ರೂ. ಪರವಾನಗಿ ಶುಲ್ಕವನ್ನು ಮನ್ನಾ ಮಾಡಲಾಗಿದೆ ಎಂಬ ಗಂಭೀರ ಭ್ರಷ್ಟಾಚಾರ ಆರೋಪ ಬಂದಿದೆ. ಕಾನೂನುಬಾಹಿರ ನಿರ್ಧಾರವನ್ನು ತೆಗೆದುಕೊಂಡ ಬಳಿಕ ಅದನ್ನು ಕಾನೂನುಬದ್ಧಗೊಳಿಸಲು ಸರ್ಕಾರ ಪ್ರಯತ್ನಿಸಿ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಜೊತೆ ಜೊತೆಯಲಿ ಟೀಮ್ ನನ್ನ ಹೊರ ಹಾಕಿದರೆ, ಪ್ರೆಸ್ ಮೀಟ್ ಮಾಡಿ ಉತ್ತರ ಕೊಡುವೆ : ನಟ ಅನಿರುದ್ಧ
ವಿಮಾನ ನಿಲ್ದಾಣದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಇದ್ದರೂ ವಿಮಾನ ನಿಲ್ದಾಣದ ಅಧಿಕಾರಿಗಳಿಂದ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕಾಗುತ್ತದೆ. ಎನ್‌ಒಸಿ ಇಲ್ಲದೇ ಮಾರಾಟ ಮಾಡಿದರೆ ದಂಡವನ್ನು ಹಾಕಲಾಗುತ್ತದೆ. ಎನ್‌ಒಸಿ ಇಲ್ಲದೇ ಮದ್ಯ ಮಾರಾಟ ಮಾಡಿದವರಿಗೆ 30 ಕೋಟಿ ರೂ. ದಂಡವನ್ನು ಹಾಕಬೇಕಿತ್ತು. ಆದರೆ ಸಿಸೋಡಿಯಾ ನಿರ್ದೇಶನದ ಹಿನ್ನೆಲೆಯಲ್ಲಿ 30 ಕೋಟಿ ರೂ ದಂಡವನ್ನು ಮನ್ನಾ ಮಾಡಲಾಗಿದೆ.
ಪರವಾನಗಿ ಶುಲ್ಕ ಬಾಕಿ ಉಳಿಸಿಕೊಂಡ ಪರವಾನಗಿದಾರರ ವಿರುದ್ಧದ ಕಠಿಣ ಕ್ರಮಕ್ಕೆ ತಡೆ ನೀಡಲಾಗಿದೆ. ಅಬಕಾರಿ ನೀತಿ ಉಲ್ಲಂಘಿಸಿದ ಪರವಾನಗಿದಾರರ ವಿರುದ್ಧ ಯಾವುದೇ ದಂಡ ಕ್ರಮ ಕೈಗೊಂಡಿಲ್ಲ.
ಆಮದು ಮಾಡಿದ ಪ್ರತಿ ಕೇಸ್ ಬಿಯರ್ ಮೇಲಿದ್ದ 50 ರೂ.ಇಳಿಕೆ ಮಾಡಲಾಗಿದೆ. ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೇ ಹಿಂಪಡೆದ ಕಾರಣ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟವಾಗಿದೆ.