ಬೆಂಗಳೂರು: ಮಂಗಳೂರು ಬಾಂಬ್ ಬ್ಲಾಸ್ಟ್ ಗೂ (Mangaluru Bomb Blast) ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟಕ್ಕೂ ಲಿಂಕ್ ಕಾಣುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಮಂಗಳೂರು ಬ್ಲಾಸ್ಟ್ ಗೂ ಇದಕ್ಕೂ ಲಿಂಕ್ ಕಾಣುತ್ತಿದೆ. ಟೈಮರ್ ಎಲ್ಲಾ ಲಿಂಕ್ ಕಾಣ್ತಿದೆ. 8-10 ಅಡಿಯಲ್ಲಿ ಎಫೆಕ್ಟ್ ಆಗಿದೆ. ಸೌಂಡ್ ಜೋರಾಗಿ ಬಂದಿದೆ. ಬಸ್ಸಲ್ಲಿ ಬಂದಿದ್ದಾರೆ ಎಲ್ಲಾ ಗೊತ್ತಾಗಿದೆ ಎಂದರು.
ನಾನು ಹೋಮ್ ಮಿನಿಸ್ಟರ್, ಸಿಎಂ ಎಲ್ಲರೂ ಸೀರಿಯಸ್ ಆಗಿ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. 8 ಟೀಂ ಮಾಡಿದ್ದೀವಿ ಎಲ್ಲಾ ಆಯಾಮದಲ್ಲೂ ತನಿಖೆ ಮಾಡುತ್ತಿದ್ದೇವೆ. ಬಿಜೆಪಿಯವರು (BJP) ರಾಜಕಾರಣ ಮಾಡೋದಾದರೆ ಮಾಡಲಿ. ಅವರು ಬೆಂಗಳೂರು ಇಮೇಜ್ ಹಾಳು ಮಾಡೋಕೆ ಪ್ರಯತ್ನಿಸುತ್ತಿದ್ದಾರೆ. ಅವರು ರಾಜಕೀಯ ಮಾಡೋದು ಬೇಡ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಂಗಳೂರಿನ ಕುಕ್ಕರ್ ಬ್ಲಾಸ್ಟ್‌ಗು ಕೆಫೆಯಲ್ಲಿ ನಡೆದ ಸ್ಫೋಟಕ್ಕೂ ಸಾಮ್ಯತೆ ಇಲ್ಲ: ಸಿಎಂ
ನಡೆದಿದ್ದೇನು..?: ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಶುಕ್ರವಾರ ಮಧ್ಯಾಹ್ನ 1 ಗಂಟೆ 05 ನಿಮಿಷ ಸುಮಾರಿಗೆ ನಡೆದ ಘಟನೆಯಲ್ಲಿ ಕೆಲವರು ಗಾಯಗೊಂಡು ಆಸ್ಪತ್ರೆಯಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರೀ ಸ್ಫೋಟದ ಪರಿಣಾಮ ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿತ್ತು. ಘಟನೆ ನಡೆಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಪ್ರಾಥಮಿಕ ಹಂತದಲ್ಲಿ ಸಿಲಿಂಡರ್ ಸ್ಫೋಟದಿಂದ ಘಟನೆ ನಡೆದಿದೆ ಎನ್ನಲಾಗಿತ್ತು. ಆದರೆ ಇದೀಗ ಬಾಂಬ್ ಬ್ಲಾಸ್ಟ್ ಆಗಿರುವುದು ಬಯಲಾಗಿದೆ.
ಆರೋಪಿ ಚಹರೆ ಪತ್ತೆ: ಬ್ಲಾಸ್ಟ್ ಮಾಡಿದ ಆರೋಪಿಯ ಎಕ್ಸ್ ಕ್ಲೂಸೀವ್ ವೀಡಿಯೋ ಹಾಗೂ ಫೋಟೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ತನ್ನ ಚಹರೆ ಎಲ್ಲೂ ಬೀಳದಿರಲಿ ಅಂತಾ ಶಂಕಿತ ಉಗ್ರ ಮುಖಕ್ಕೆ ಮಾಸ್ಕ್ ಕಣ್ಣಿಗೆ ಕೂಲಿಂಗ್ ಗ್ಲಾಸ್, ತಲೆ ಮೇಲೆ ವೈಟ್ ಹ್ಯಾಟ್ ಹಾಕಿಕೊಳ್ಳುವ ಮೂಲಕ ಮೊದಲೇ ಪ್ರೀ ಪ್ಲಾನ್ ಮಾಡಿಕೊಂಡು ಕೆಫೆಗೆ ಎಂಟ್ರಿ ಕೊಟ್ಟಿದ್ದಾನೆ. ಜೊತೆಗೆ ಬಲಭುಜದ ಹಿಂಬದಿಗೆ ಕಪ್ಪು ಬಣ್ಣದ ಬ್ಯಾಗ್ ಹಾಕಿಕೊಂಡು ಹೋಟೆಲ್ ಗೆ ಬಂದಿರುವ ಆರೋಪಿ ಹೋಟೆಲ್ ನಲ್ಲಿ ತಿಂಡಿ ತಿಂದು ಸಾಗುವ ದೃಶ್ಯಗಳು ಸಿಕ್ಕಿವೆ.
ಟೋಕನ್ ತೆಗೆದುಕೊಂಡ ಶಂಕಿತ ರವೆ ಇಡ್ಲಿ ತಿಂದು ಹ್ಯಾಡ್ ವಾಶಿಂಗ್‍ಗೆ ಹೋಗಿದ್ದಾನೆ. ಹ್ಯಾಂಡ್ ವಾಶ್ ಮಾಡಿ ಬ್ಯಾಗ್ ಅಲ್ಲೇ ಇಟ್ಟು ಬೈಕ್‍ನಲ್ಲಿ ತೆರಳಿದ್ದಾನೆ. ಆತ ಹೋದ ಸುಮಾರು ಒಂದು ಗಂಟೆಯ ಬಳಿಕ ಈ ಬ್ಯಾಗ್ ಬ್ಲಾಸ್ಟ್ ಆಗಿದೆ. ಸದ್ಯ ಬೈಕ್ ಮಾಲೀಕ ಯಾರು..? ಬೈಕ್ ಎಲ್ಲಿನದ್ದು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.