ಬೆಂಗಳೂರು: ನಡೆದಾಡುವ ದೇವರನ್ನ ಪ್ರತ್ಯೇಕ ಧರ್ಮದ ಈ ವಿಚಾರಕ್ಕೆ ಬಳಸಿಕೊಂಡಿದ್ದು ಅತ್ಯಂತ ಹೀನಾಯ ಕೃತ್ಯ ಎಂದು ಜೆಡಿಎಸ್ ನಾಯಕ ಎಚ್‍ಡಿ ಕುಮಾರಸ್ವಾಮಿ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ವಿರುದ್ಧ ಕಿಡಿಕಾರಿದ್ದಾರೆ.
ಲಿಂಗಾಯತ ಧರ್ಮಕ್ಕೆ ಶ್ರೀಗಳ ಬೆಂಬಲ ಇದೆ ಎನ್ನುವ ಎಂ.ಬಿ.ಪಾಟೀಲ್ ಹೇಳಿಕೆಗೆ ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿವಕುಮಾರ ಸ್ವಾಮೀಜಿ ಹೆಸರನ್ನ ಈ ವಿಚಾರದಲ್ಲಿ ಬಳಸಿಕೊಂಡಿದ್ದು ಅಕ್ಷಮ್ಯ. ಇವರನ್ನ ಅಪ್ರಭುದ್ದ ಅನ್ನಬೇಕಾ ಎಂದು ಪ್ರಶ್ನಿಸಿದರು. ಅಷ್ಟೇ ಅಲ್ಲದೇ ಈ ತಪ್ಪಿಗೆ ಸಾರ್ವಜನಿಕವಾಗಿ ಶ್ರೀಗಳಲ್ಲಿ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.
Advertisement
ಬಿಬಿಎಂಪಿ ಮೈತ್ರಿ ವಿಚಾರದಲ್ಲಿ ಸಿಎಂ ಸೂಚನೆ ಮೇರೆಗೆ ಇಂದು ರಾಮಲಿಂಗಾರೆಡ್ಡಿ ಅವರು ದೇವೇಗೌಡರನ್ನ ಭೇಟಿಯಾಗಿದ್ದಾರೆ. ಅವರೇನು ಚರ್ಚಿಸಿದ್ದಾರೆ ಗೊತ್ತಿಲ್ಲ. ನಮ್ಮ ಸದಸ್ಯರೆಲ್ಲ ಜೆಡಿಎಸ್‍ಗೆ ಮೇಯರ್ ಸ್ಥಾನ ಬೇಕು ಎಂದಿದ್ದಾರೆ. ದೇವೇಗೌಡರ ಜೊತೆ ಏನು ಮಾತನಾಡಿದ್ದಾರೆ ಎಂದು ತಿಳಿದುಕೊಳ್ಳುತ್ತೇನೆ. ಬಳಿಕ ಸಂಸದ ಕುಪ್ಪೇಂದ್ರ ರೆಡ್ಡಿ ಸೇರಿದಂತೆ ಎಲ್ಲ ಪ್ರಮುಖರ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಎಂದು ಹೇಳಿದರು.