ವಾಷಿಂಗ್ಟನ್: ಪಾಕಿಸ್ತಾನದ (Pakistan) ನೂತನ ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿದ ಇಶಾಕ್ ದಾರ್ (Ishaq Dar) ಅವರು ಅಮೆರಿಕಗೆ (America) ಭೇಟಿ ನೀಡಿದ್ದ ಸಂದರ್ಭ ಕೆಲ ಅಪರಿಚಿತ ವ್ಯಕ್ತಿಗಳು ಅವರಿಗೆ ಸುಳ್ಳುಗಾರ, ಕಳ್ಳ ಎಂದು ನಿಂದಿಸಿರುವ ಘಟನೆ ನಡೆದಿದೆ. ಇದರಿಂದ ಸಚಿವರು ಕೂಡಾ ಕಿಡಿಯಾಗಿದ್ದಾರೆ.
ಜಾಗತಿಕ ಸಾಲ ನೀಡುವ ಸಂಸ್ಥೆಗಳೊಂದಿಗೆ ಸಭೆಗಳಲ್ಲಿ ಭಾಗವಹಿಸಲು ಹಾಗೂ ನಗದು ಕೊರತೆ ಮತ್ತು ಪ್ರವಾಹ ಪೀಡಿತ ಪಾಕಿಸ್ತಾನಕ್ಕೆ ಹೆಚ್ಚು ಅಗತ್ಯವಿರುವ ನೆರವು ಪಡೆಯಲು ಇಶಾಕ್ ದಾರ್ ಅವರು ವಾಷಿಂಗ್ಟನ್ ತೆರಳಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ (Airport) ಅವರಿಗೆ ಅವಾಚ್ಯವಾಗಿ ನಿಂದಿಸಿದ ಘಟನೆ ನಡೆದಿದೆ.
ಘಟನೆಯ ವೀಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದ್ದು, ವೀಡಿಯೋದಲ್ಲಿ ಕೆಲ ವ್ಯಕ್ತಿಗಳು ದಾರ್ ಅವರನ್ನು ಚೋರ್ ಚೋರ್ (ಕಳ್ಳ ಕಳ್ಳ) ಎಂದು ಗೇಲಿ ಮಾಡಿರುವುದು ಕಂಡುಬಂದಿದೆ. ಇದರಿಂದ ಕಿಡಿಯಾದ ಸಚಿವರು ಲೇವಡಿ ಮಾಡಿದ ವ್ಯಕ್ತಿಗಳಿಗೆ ಪ್ರತ್ಯುತ್ತರವಾಗಿ, ನೀನು ಸುಳ್ಳುಗಾರ, ಕಳ್ಳ ಎಂದು ಖಾರವಾಗಿ ನುಡಿದಿದ್ದಾರೆ. ಇದನ್ನೂ ಓದಿ: ಜಿನ್‌ಪಿಂಗ್ ವಿರುದ್ಧ ಭುಗಿಲೆದ್ದ ಚೀನಾದ ಜನ – ಅಪರೂಪದಲ್ಲಿ ಕಂಡುಬಂತು ಬ್ಯಾನರ್
72 ವರ್ಷದ ಇಶಾಕ್ ದಾರ್ ಅವರು ಮಿಫ್ತಾ ಇಸ್ಮಾಯಿಲ್ ಅವರ ಬಳಿಕ ಇತ್ತೀಚೆಗೆ ಪಾಕಿಸ್ತಾನದ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡರು. ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವಾರ್ಷಿಕ ಸಭೆಗಳಲ್ಲಿ ಪಾಲ್ಗೊಳ್ಳಲು ಅವರು ಅಮೆರಿಕಗೆ ತೆರಳಿದ್ದರು.
ಕಳೆದ ತಿಂಗಳು ಪಾಕಿಸ್ತಾನದಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ದೇಶ ಆರ್ಥಿಕವಾಗಿ ನಲುಗಿ ಹೋಗಿದೆ. ಇದೀಗ ಪಾಕಿಸ್ತಾನ ಅಂತಾರಾಷ್ಟ್ರೀಯ ಸಾಲದಾತರ ಮೊರೆ ಹೋಗಿದೆ. ಇದನ್ನೂ ಓದಿ: ರಷ್ಯಾದಿಂದ ದೆಹಲಿಗೆ ಬಂದ ವಿಮಾನದಲ್ಲಿ ಬಾಂಬ್ ಬೆದರಿಕೆ – ದೆಹಲಿ ಏರ್‌ಪೋರ್ಟ್ ಹೈ ಅಲರ್ಟ್