ಬೆಂಗಳೂರು: ರಾಜ್ಯದ ಭೋವಿ ನಿಗಮದಲ್ಲಿ ಭ್ರಷ್ಟಾಚಾರ (Corruption) ಆರೋಪ ಪ್ರಕರಣ ತಣ್ಣಗಾಗುವ ಮುನ್ನವೇ ಮತ್ತೊಂದು ಭಾರೀ ಅಕ್ರಮ ಬೆಳಕಿಗೆ ಬಂದಿದೆ. ಖುದ್ದು ಕಾಂಗ್ರೆಸ್‌ನ ಹಿರಿಯ ನಾಯಕರೇ ಅಕ್ರಮದ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ತನಿಖೆಗೆ (Investigation) ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ 1 ಲಕ್ಷ ಕೋಟಿ ಮೊತ್ತದ ಗಣಿ ಹಗರಣ ನಡೆದಿದೆ. ಈ ಸಂಬಂಧ ತನಿಖೆ ನಡೆಸಲು ವಿಶೇಷ ತನಿಖಾ ತಂಡ (SIT) ರಚಿಸಬೇಕು ಎಂದು ಮಾಜಿ ಸಂಸದರು, ಮಾಜಿ ಎಂಎಲ್‌ಸಿಗಳು ಹಾಗೂ ಮಾಜಿ ಸಚಿವರು ಸೇರಿ 20ಕ್ಕೂ ಹೆಚ್ಚು ನಾಯಕರು ಪತ್ರ ಬರೆದಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್, ಹೆಚ್.ಕೆ ಪಾಟೀಲ್, ಎಸ್‌ಎಸ್ ಮಲ್ಲಿಕಾರ್ಜುನ್ ಅವರಿಗೂ ಪತ್ರದಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಚಾ.ನಗರ ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಕೊನೆಗೂ ಭರವಸೆಯ ಬೆಳಕು; ಸರ್ಕಾರಿ ನೌಕರಿ ಕೊಡಲು ಸಚಿವ ಸಂಪುಟ ಅಸ್ತು
ರಾಜ್ಯದಲ್ಲಿ ಬಳ್ಳಾರಿ (Ballari), ತುಮಕೂರು ಹಾಗೂ ಚಿತ್ರದುರ್ಗದಲ್ಲಿ ಗಣಿಗಾರಿಕೆಯಲ್ಲಿ ಭಾರೀ ಅಕ್ರಮ ನಡೆದಿರುವ ವರದಿ ಕೊಟ್ಟಿದೆ. ವರದಿ ಅನ್ವಯ 1 ಲಕ್ಷ ಕೋಟಿ ಗಣಿ ಅಕ್ರಮ ನಡೆದಿದೆ. ಈ ಬಗ್ಗೆ ಎಸ್‌ಐಟಿ ರಚನೆ ಮಾಡಿ ತನಿಖೆ ನಡೆಸಬೇಕೆಂದು ಸಿಎಂಗೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಜಾತಿ ಜನಗಣತಿ | ದುಡ್ಡು ಹೊಡಿಯೋಕೆ ಇಂತಹ ಸ್ಕೀಮ್ ಹುಡುಕ್ತೀರಾ? – ಸಿ.ಟಿ ರವಿ ಕಿಡಿ
ಪತ್ರದಲ್ಲಿ ಏನಿದೆ?
ರಾಜ್ಯದ ಬಳ್ಳಾರಿ, ತುಮಕೂರು, ಚಿತ್ರದುರ್ಗ ಮತ್ತು ಇನ್ನಿತರ ಭಾಗಗಳಲ್ಲಿ ಅತ್ಯಂತ ಉತ್ಕೃಷ್ಟವಾದ ಕಬ್ಬಿಣದ ಅದಿರು ಲಭ್ಯವಾಗುತ್ತಿರುವುದನ್ನು ಗಮನಿಸಿದ ಕೆಲವು ಗಣಿ ಮಾಲೀಕರು 2000 ಇಸವಿಯಿಂದ ಅಕ್ರಮವಾಗಿ ಗಣಿ ಲೂಟಿ ಮಾಡುತ್ತಿದ್ದರು. ಇದನ್ನು ಗಮನಿಸಿದ ಕಾಂಗ್ರೆಸ್ ಪಕ್ಷದ ನಾಯಕತ್ವವು ವಿಧಾನ ಪರಿಷತ್‌ನಲ್ಲಿ ಹೋರಾಟ ಮಾಡಿ ಹಗರಣವನ್ನು ನ್ಯಾ. ಮೂರ್ತಿ ಯು.ಎಲ್ ಭಟ್ ಆಯೋಗಕ್ಕೆ ತನಿಖೆ ಮಾಡಲು ಒಪ್ಪಿಸಲಾಗಿತ್ತು. ಭಟ್ ಅವರ ಆಯೋಗವು ಒದೊಂದು ಅಂತರರಾಜ್ಯ ಮತ್ತು ಅಂತಾರಾಷ್ಟ್ರೀಯ ಹಗರಣವಾಗಿರುವುದರಿಂದ ಸಿಬಿಐ ತನಿಖೆಗೆ ವಹಿಸುವುದು ಸೂಕ್ತವೆಂದು ಆದೇಶ ಮಾಡಿತ್ತು. ಆದ್ರೆ ಅದನ್ನ ಅಂದಿನ ರಾಜ್ಯ ಸರ್ಕಾರ ಒಪ್ಪಿರಲಿಲ್ಲ. ಅದನ್ನು ವಿರೋಧಿಸಿ ವಿಧಾನ ಪರಿಷತ್ತಿನಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ನಾಯಕತ್ವ ಮಾಡಿದ ಹೋರಾಟದಿಂದ ಅಂದಿನ ಸರ್ಕಾರ ಈ ಹಗರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಲಾಗಿತ್ತು.
ಆ ಮಧ್ಯೆ ಕಾಂಗ್ರೆಸ್ ಪಕ್ಷದಿಂದ ‘ಸತ್ಯ ಶೋಧನಾ ಸಮಿತಿ’ಯನ್ನು ವಿ.ಎಸ್. ಉಗ್ರಪ್ಪನವರ ನೇತೃತ್ವದಲ್ಲಿ ಬಸವರಾಜ ರಾಯರೆಡ್ಡಿ, ಅಮರೇಗೌಡ ಬಯ್ಯಾಮರ, ವಿ.ಮುನಿಯಪ್ಪ, ಕೆ. ಶಿವಮೂರ್ತಿ ನಾಯಕ್ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು. ಆ ಸಮಿತಿಯು ಅಕ್ರಮ ಗಣಿಗಾರಿಕೆಯ ಪೂರ್ಣ ಮಾಹಿತಿಯನ್ನು ಸಂಗ್ರಹಿಸಿ. 2008ರ ನವೆಂಬರ್ 16ರಂದು ವರದಿ ನೀಡಿ. ಹತ್ತಾರು ಸಾವಿರ ಕೋಟಿ ಮೌಲ್ಯದ ಕಬ್ಬಿಣದ ಅದಿರನ್ನು ಕೆಲವರು ಲೂಟಿ ಮಾಡಿ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ. ಆದ್ದರಿಂದ ಅಕ್ರಮ ಗಣಿಗಾರಿಕೆ ವಿಷಯವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಿ ರಾಜ್ಯದ ಸಂಪತ್ತನ್ನು ಉಳಿಸಬೇಕು ಎಂದು ಸಮಿತಿಯು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಯಿತು. ಇದಾದ ಬಳಿಕ ಅನೇಕ ಬೆಳವಣಿಗೆ ನಡೆದಿದೆ.
ಈ ಎಲ್ಲಾ ವರದಿಗಳಿಂದ ಸ್ಪಷ್ಟಪಡಿಸುವುದೇನೆಂದ್ರೆ ರಾಜ್ಯದ ಕಬ್ಬಿಣ ಅದಿರು ಸಂಪತ್ತನ್ನು ಕೆಲವು ವ್ಯಕ್ತಿಗಳು/ ಸಂಘ ಸಂಸ್ಥೆಗಳು, ರಾಜಕಾರಣಿಗಳ ಮತ್ತು ಅಧಿಕಾರಿಗಳ ಸಹಕಾರದಿಂದ ಅಕ್ರಮವಾಗಿ 1 ಲಕ್ಷ ಕೋಟಿಗೂ ಅಧಿಕ ಸಂಪತ್ತನ್ನು ಲೂಟಿ ಮಾಡಿ, ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದಾರೆ. ಇದನ್ನೂ ಓದಿ: ಹಾಸನ| ಗಣೇಶ ಮೆರವಣಿಗೆ ವೇಳೆ ಭೀಕರ ಅಪಘಾತ – ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಆದ್ದರಿಂದ ರಾಜ್ಯ ಸರ್ಕಾರ ಹೆಚ್.ಕೆ ಪಾಟೀಲ್ ಅವರ ನೇತೃತ್ವದ ಉಪಸಮಿತಿ ನೀಡಿರುವ ವರದಿ ಆಧಾರದ ಮೇಲೆ ತಪ್ಪಿತಸ್ಥರು ಯಾವುದೇ ಪಕ್ಷದವರಾಗಲಿ, ಯಾವುದೇ ಅಧಿಕಾರಿಗಳಾಗಲಿ, ಯಾವುದೇ ಸಂಘ ಸಂಸ್ಥೆಗೆ ಸೇರಿದವರಾಗಿರಲಿ, ಎಸ್‌ಐಟಿ ರಚಿಸಿ ತನಿಖೆ ನಡೆಸಬೇಕು. ಲೂಟಿಕೋರರ ವಿರುದ್ಧ ಕ್ರಮ ಆಗಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.