– ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಜೊತೆ ವರ್ಚುಯಲ್ ಸಭೆ
ನವದೆಹಲಿ/ಬೆಂಗಳೂರು: ಕೋವಿಡ್ ಸಮಸ್ಯೆಯನ್ನು (Covid Problem) ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೇಗೆ ಒಗ್ಗಟ್ಟಿನಿಂದ ಎದುರಿಸಿದ್ದೇವೋ ಅದೇ ರೀತಿ ಇಂಧನ ಬಿಕ್ಕಟ್ಟನ್ನು ಎದುರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ಸಂಘರ್ಷದ ಹಿನ್ನೆಲೆಯಲ್ಲಿ ಸಿದ್ಧತೆ ಮತ್ತು ಭಾರತದ ಮೇಲೆ ಅದರ ಸಂಭಾವ್ಯ ಪರಿಣಾಮದ ಪರಿಶೀಲನೆಗಾಗಿ ಶುಕ್ರವಾರ ಮೋದಿ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳ ವರ್ಚುವಲ್ ಸಭೆ ನಡೆಯಿತು.
ಸಹಕಾರ ಮತ್ತು ಸಮನ್ವಯದ ಅದೇ ಮನೋಭಾವವು ಭಾರತದ ದೊಡ್ಡ ಶಕ್ತಿಯಾಗಿ ಉಳಿದಿದೆ. ಟೀಮ್ ಇಂಡಿಯಾ (Team India) ಈ ಪರಿಸ್ಥಿತಿಯನ್ನು ನಿವಾರಿಸುತ್ತದೆ ಎಂಬ ಆಶಾವಾದವನ್ನು ವ್ಯಕ್ತಪಡಿಸಿದ ಮೋದಿ, ಎಲ್ಲಾ ಮುಖ್ಯಮಂತ್ರಿಗಳು ಹಂಚಿಕೊಂಡ ಅಮೂಲ್ಯ ಸಲಹೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆರ್ಥಿಕ ಮತ್ತು ವ್ಯಾಪಾರ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು, ಇಂಧನ ಭದ್ರತೆಯನ್ನು ಖಚಿತಪಡಿಸುವುದು, ನಾಗರಿಕರ ಹಿತಾಸಕ್ತಿಗಳನ್ನು ಕಾಪಾಡುವುದು ಮತ್ತು ಕೈಗಾರಿಕೆ ಮತ್ತು ಪೂರೈಕೆ ಸರಪಳಿಗಳನ್ನು ಬಲಪಡಿಸುವುದು ಸರ್ಕಾರದ ಆದ್ಯತೆಗಳಾಗಿವೆ ಎಂದು ಮೋದಿ ಹೇಳಿದರು. ಇದನ್ನೂ ಓದಿ: ಕರ್ನಾಟಕ, ತಮಿಳುನಾಡಿಗೆ ಕಳುಹಿಸಿಲ್ಲ ಯಾಕೆ? ಗುಜರಾತಿಗೆ ಯಾಕೆ ತೈಲ ಟ್ಯಾಂಕರ್ ಹೋಗಬೇಕಿತ್ತು?- ಡಿಕೆಶಿ ಕಿಡಿ
ಮಾರ್ಚ್ 3 ರಿಂದ ಅಂತರ-ಸಚಿವಾಲಯ ಗುಂಪು ಪರಿಸ್ಥಿತಿಯನ್ನು ಪ್ರತಿದಿನ ಪರಿಶೀಲಿಸುತ್ತದೆ ಮತ್ತು ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ತಿಳಿಸಿದರು.
ತಪ್ಪು ಮಾಹಿತಿ ಮತ್ತು ವದಂತಿಗಳ ಹರಡುವಿಕೆಯ ವಿರುದ್ಧ ಎಚ್ಚರಿಕೆ ನೀಡಿದ ಅವರು, ಭೀತಿಯನ್ನು ತಡೆಗಟ್ಟಲು ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಸಕಾಲಿಕವಾಗಿ ಪ್ರಸಾರ ಮಾಡುವುದು ಅತ್ಯಗತ್ಯ ಎಂದರು.
ಈ ಸಭೆಯಲ್ಲಿ ರಾಜ್ಯದ ಪರವಾಗಿ ಇಂಧನ ಸಚಿವ ಮುನಿಯಪ್ಪ ಮತ್ತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಭಾಗಿಯಾಗಿದ್ದರು.
ಸಭೆಯ ಬಳಿಕ ಮಾತನಾಡಿದ ಮುನಿಯಪ್ಪ, ಕೋವಿಡ್ ಕೇಂದ್ರ ಮತ್ತು ರಾಜ್ಯಗಳು ಒಟ್ಟಾರೆಯಾಗಿ ಕಾರ್ಯ ನಿರ್ವಹಿಸಬೇಕು. ಸೋಲಾರ್ ಎನರ್ಜಿ ಹೆಚ್ಚೆಚ್ಚು ಉತ್ಪಾದನೆ ಮಾಡಬೇಕು. ಬಯೋ ಗ್ಯಾಸ್ ಉತ್ಪಾದನೆ ಹೆಚ್ಚುಗೊಳಿಸುವ ಮೂಲಕ ನಾವು ಸ್ವಾವಲಂಬಿಯಾಗಬೇಕು ಎಂದು ಮೋದಿ ಹೇಳಿದ್ದಾರೆ ಎಂದು ತಿಳಿಸಿದರು.
ಕಮರ್ಷಿಯಲ್ ಗ್ಯಾಸ್ ಪೂರೈಕೆ ಹೆಚ್ಚುಗೊಳಿಸವಂತೆ ಮನವಿ ಮಾಡಿದ್ದು ಪ್ರಧಾನಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.

