-ಜಯಮೃತ್ಯುಂಜಯ ಸ್ವಾಮೀಜಿ ಬಹಿರಂಗ ಕ್ಷಮೆಯಾಚಿಸಬೇಕು
ರಾಯಚೂರು: ಸಚಿವರಾದ ಎಂ.ಬಿ.ಪಾಟೀಲ್, ವಿನಯ ಕುಲಕರ್ಣಿ ಖಾದಿ ಬಿಟ್ಟು ಖಾವಿ ತೊಟ್ಟು ಲಿಂಗಾಯತ ಧರ್ಮ ಸ್ಥಾಪಿಸಲು ಮುಂದಾಗಲಿ ಅಂತ ಕಾಂಗ್ರೆಸ್ ಉಚ್ಚಾಟಿತ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ರಾಯಚೂರಿನಲ್ಲಿ ಹೇಳಿದ್ದಾರೆ.
ರಾಯಚೂರಿನಿಂದ ಬೆಳಗಾವಿವರೆಗೆ ಜೆಡಿಎಸ್ ವತಿಯಿಂದ ಹೈದ್ರಾಬಾದ್ ಕರ್ನಾಟಕ ಸಮಗ್ರ ಅಭಿವೃದ್ದಿಗಾಗಿ ಸ್ವಾಭಿಮಾನಿ ಕನ್ನಡಿಗರ ಬೃಹತ್ ಜಾಥ ಹಮ್ಮಿಕೊಂಡಿರುವ ನಡಹಳ್ಳಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು. ಜಯಮೃತ್ಯುಂಜಯ ಸ್ವಾಮೀಜಿ ವೀರಶೈವರ ಬಗೆಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದು, ಹೇಳಿಕೆಯನ್ನ ಖಂಡಿಸುವುದಾಗಿ ಹೇಳಿದ ನಡಹಳ್ಳಿ, ಸ್ವಾಮೀಜಿಗಳು ಬಹಿರಂಗ ಕ್ಷಮೆಯಾಚಿಸಬೇಕು ಅಂತ ಆಗ್ರಹಿಸಿದ್ದಾರೆ.
Advertisement
70 ವರ್ಷದ ಆಡಳಿತದಲ್ಲಿ ನೆನಪಾಗದ ಲಿಂಗಾಯತ ಧರ್ಮ ಈಗ ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ ಗೆ ನೆನಪಾಗಿದೆ. ಚುನಾವಣೆ ಹಿನ್ನೆಲೆ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ತಾಕತ್ತಿದ್ದರೆ ಕ್ಯಾಬಿನೆಟ್‍ನಲ್ಲಿ ನಿರ್ಧಾರ ತೆಗೆದುಕೊಳ್ಳಲಿ ಅಂತ ಸವಾಲೆಸೆದರು. ಇನ್ನೂ ಬೆಳಗಾವಿ ಅಧಿವೇಶನ 30 ದಿನ ಕಾಲ ನಡೆಯಬೇಕು ಟೂರಿಂಗ್ ಟಾಕೀಸ್ ಆಗಬಾರದು. ಈ ಅಧಿವೇಶನದಲ್ಲಿ ಕೇವಲ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತಾಗಿ ಚರ್ಚೆ ನಡೆಯಬೇಕು ಅಂತ ಎಸ್.ಪಾಟೀಲ್ ನಡಹಳ್ಳಿ ಆಗ್ರಹಿಸಿದ್ದಾರೆ.