Districts
ಅನ್ನದಾತರಿಗೆ ಪುಡಿಗಾಸು ಪರಿಹಾರ- ನದಿಯಲ್ಲಿ ನೀರಿಲ್ಲದಿದ್ರೂ ಸಮೃದ್ಧ ಬೆಳೆ ಎಂದು ಸರ್ಕಾರಕ್ಕೆ ವರದಿ

ಹಾವೇರಿ: ಅಧಿಕಾರಿಗಳೇ ಅನ್ನದಾತರ ಬೆನ್ನಿಗೆ ಇರಿದ ಸುದ್ದಿ ಇದು. ಕಷ್ಟಪಟ್ಟು ಬೆಳೆ ಬೆಳೆದ ರೈತನಿಗೆ ಬರದಿಂದ ಬರೆ ಬಿತ್ತು. ಸರ್ಕಾರ ಕೊಡೋ ಅಲ್ಪ ಸ್ವಲ್ಪ ಪರಿಹಾರದಿಂದಾದ್ರೂ ಕೊಂಚ ಸುಧಾರಿಸಿಕೊಳ್ಳೋಣ ಎಂದರೆ ಅದಕ್ಕೆ ಕಲ್ಲು ಹಾಕಿದ್ದಾರೆ ಹಾವೇರಿ ಜಿಲ್ಲೆಯ ಹೊಣೆಗೇಡಿ ಅಧಿಕಾರಿಗಳು.
ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಭೀಕರ ಬರಗಾಲ ತಾಂಡವವಾಡುತ್ತಿದೆ. ವರದಾ, ತುಂಗಭದ್ರಾ, ಕುಮುದ್ವಿತಿ ನದಿಗಳಲ್ಲಿ ನೀರಿಲ್ಲ. ಹೀಗಿದ್ದರೂ ಆಡೂರು, ಶೀಗಿಹಳ್ಳಿ, ಶಂಕ್ರಿಕೊಪ್ಪ ಗ್ರಾಮಗಳ ರೈತರು ವರದಾ ನದಿ ನೀರು ಬಳಸಿಕೊಂಡು ಸಮೃದ್ಧ ಬೆಳೆ ಬೆಳೆದಿದ್ದಾರೆ ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ.
ಅಷ್ಟೇ ಅಲ್ಲ ಬೆಳೆ ಪರಿಹಾರ ರೂಪದಲ್ಲಿ 50, 100, 500 ರೂಪಾಯಿ ಪರಿಹಾರ ಕೊಟ್ಟಿದೆ ಸರ್ಕಾರ. ಪ್ರತಿ ಎಕರೆಗೆ ಕನಿಷ್ಟ ಎರಡೂವರೆ ಸಾವಿರ ರೂಪಾಯಿಯಿಂದ ಐದು ಸಾವಿರ ರೂಪಾಯಿಯಾದರೂ ಬೆಳೆ ಹಾನಿ ಪರಿಹಾರ ಸಿಗಬೇಕು. ಕೆಲವೇ ಕೆಲವು ರೈತರಿಗೆ ಐದಾರು ಸಾವಿರ ರೂಪಾಯಿ ಪರಿಹಾರ ಬಂದಿದ್ದು ಬಿಟ್ರೆ ಉಳಿದ ಬಹುತೇಕ ರೈತರಿಗೆ ಎಕರೆಗೆ ಐವತ್ತು, ನೂರು ರೂಪಾಯಿಯಂತೆ ಪರಿಹಾರ ಹಣ ಜಮೆ ಆಗಿದೆ.
