ರಾಯಚೂರು: ರಾಯಚೂರಿನ ಲಿಂಗಸಗೂರು ತಾಲೂಕಿನ ಮುದಗಲ್ ಬಳಿಯ ಭೈರಪ್ಪನಗುಡ್ಡದಲ್ಲಿ ಕಳೆದ ಒಂದು ವಾರದಿಂದ ಬೀಡುಬಿಟ್ಟಿದ್ದ ಗಂಡು ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.
ಜಾನುವಾರುಗಳ ಮೇಲೆ ದಾಳಿ ಮಾಡಿ ಸುತ್ತಮುತ್ತ ಗ್ರಾಮಸ್ಥರಲ್ಲಿ ಭಯಹುಟ್ಟಿಸಿದ್ದ ಚಿರತೆ ಇದುವರೆಗೂ ಒಂದು ಆಕಳು ಕರು, ಆರು ಕುರಿ ಹಾಗೂ 20 ನಾಯಿಗಳ ಮೇಲೆ ದಾಳಿ ಮಾಡಿತ್ತು. ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಭೈರಪ್ಪನಗುಡ್ಡದಲ್ಲಿ ಬೋನು ಇಟ್ಟು ಕಾರ್ಯಚರಣೆ ನಡೆಸಿದ್ದರು. ಗುಡ್ಡಕ್ಕೆ ಬಾರದಂತೆ ದನಗಾಯಿಗಳಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಪೊಲೀಸರು ಸಹ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು.
ಕೊನೆಗೂ ಚಿರತೆ ಬೋನಿಗೆ ಬಿದ್ದಿದ್ದು ಸುತ್ತಮುತ್ತಲ ಗ್ರಾಮದ ಜನತೆ ನಿರಾಳರಾಗಿದ್ದಾರೆ. 8 ತಿಂಗಳ ಹಿಂದೆ ಇದೇ ಗುಡ್ಡದಲ್ಲಿ ಹಸಿವಿನಿಂದ ಸಾವನ್ನಪ್ಪಿದ್ದ ಗಂಡು ಚಿರತೆಯ ಶವ ಪತ್ತೆಯಾಗಿತ್ತು. ಇದಾದ ಬಳಿಕ ಪಕ್ಕದ ದುರ್ಗಮ್ಮ ದೇವಿ ಬೆಟ್ಟದಲ್ಲಿ ಕಾಣಿಸಿಕೊಂಡಿದ್ದ ಮತ್ತೊಂದು ಚಿರತೆ ಬೋನಿಗೆ ಬಿದ್ದಿತ್ತು. ಈ ಪ್ರದೇಶದಲ್ಲಿ ಕಾಣಿಸಿಕೊಂಡ ಮೂರನೇ ಚಿರತೆ ಇದಾಗಿದೆ.