ಹುಬ್ಬಳ್ಳಿ: ಸಪ್ಟೆಂಬರ್ 13 ರಿಂದ ಹತ್ತು ದಿನಗಳ ಕಾಲ ನಡೆಯುವ ವಿಧಾನಮಂಡಲ ಅಧಿವೇಶನದ ಕಲಾಪಗಳಿಗೆ ಸಚಿವರು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಸೂಚನೆ ನೀಡಬೇಕು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರದಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಬಸವರಾಜ ಹೊರಟ್ಟಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಧಾನ ಮಂಡಲ ಅಧಿವೇಶನ ಬಹು ಮುಖ್ಯವಾಗಿದೆ. ನಾಡಿನ ಜ್ವಲಂತ ಸಮಸ್ಯೆ, ಸಾರ್ವಜನಿಕ ಸಂಕಷ್ಟಗಳ ಕುರಿತು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಅಧಿವೇಶನ ಸೂಕ್ತ ವೇದಿಕೆಯಾಗಿದೆ. ಹೀಗಾಗಿ ಶಾಸನ ಸಭೆಯ ಕಲಾಪಗಳು ನಡೆಯುವಾಗ ಸಚಿವರು ಸದನದಲ್ಲಿ ಹಾಜರಿರಬೇಕು ಎಂದು ಸೂಚನೆ ನೀಡುವಂತೆ ಮುಖ್ಯಮಂತ್ರಿಗೆ, ಸಭಾಪತಿ ಕೋರಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಪ್ರಶಾಂತ್ ಸಂಬರ್ಗಿ ಕನ್ನಡ ವಿರೋಧಿ: ಚಂದ್ರಚೂಡ್
ಈ ಹಿಂದೆ ನಡೆದ ಅಧಿವೇಶನಗಳಲ್ಲಿ ಸಚಿವರು ಗೈರು ಆಗಿದ್ದರು. ಮುಂದೆ ನಡೆಯುವ ಸದನದಲ್ಲಿ ಎಲ್ಲರೂ ಭಾಗಿಯಾಗಬೇಕು. ಸಚಿವರ ಅನುಪಸ್ಥಿತಿಯು ಆಡಳಿತಾರೂಢ ಸರ್ಕಾರದಿಂದ ಉತ್ತರ ಪಡೆಯುವ ಸದಸ್ಯರ ಹಕ್ಕು ಮತ್ತು ಅವಕಾಶ ವಂಚಿಸಿದಂತಾಗುತ್ತದೆ. ಕಾರಣ ಸಚಿವರು ಸದನದಲ್ಲಿ ಹಾಜರಿರುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ತಿಳಿಸಿದ್ದಾರೆ. ಅಧಿವೇಶನ ವೇಳೆ ತಮ್ಮ ಕ್ಷೇತ್ರದ ಕಾರ್ಯಕ್ರಮಗಳನ್ನು ಉಲ್ಲೇಖಿಸಿ ಕಲಾಪದಿಂದ ವಿನಾಯಿತಿ ಕೋರಿ ಮನವಿ ಸಲ್ಲಿಸಬೇಡಿ. ಅಧಿವೇಶನದಲ್ಲಿ ಇಲಾಖೆ ಅಧಿಕಾರಿಗಳ ಪಾಲ್ಗೊಳ್ಳುವಿಕೆಯೂ ಅಷ್ಟೇ ಪ್ರಮುಖವಾಗಿದೆ. ಹೀಗಾಗಿ ಚರ್ಚೆ ವೇಳೆ ಸದನದಲ್ಲಿ ಅಧಿಕಾರಿಗಳ ಉಪಸ್ಥಿತಿ ಕುರಿತು ಮುಖ್ಯ ಕಾರ್ಯದರ್ಶಿಗಳು ಗಮನಹರಿಸಬೇಕೆಂದು ಹೊರಟ್ಟಿ ಸೂಚಿಸಿದ್ದಾರೆ.
ಕಲಾಪದಲ್ಲಿ ಆಯಾ ದಿನದಲ್ಲಿ ಹಾಜರಾಗುವ ಸಚಿವರ ಹಾಗೂ ಅಧಿಕಾರಿಗಳ ಹೆಸರನ್ನು ಆಯಾ ಸದನ ಆರಂಭಗೊಳ್ಳುವಾಗಲೇ ಪ್ರಕಟಿಸಲಾಗುವುದು ಹಾಗೂ ಗೈರು ಹಾಜರಾದವರ ಮಾಹಿತಿಯನ್ನು ಸಂಬಂಧಿಸಿದವರಿಗೆ ಕಳುಹಿಸಿ ಕ್ರಮಕ್ಕೆ ಸೂಚಿಸಲಾಗುವುದು ಎಂದು ಹೊರಟ್ಟಿ ತಿಳಿಸಿದ್ದಾರೆ. ಇದನ್ನೂ ಓದಿ: ಗುಹೆಯೊಳಗೆ ನೆಲೆಸಿರೋ ಕಲ್ಲು ಗಣಪತಿಗಿದೆ ನಾಲ್ಕು ಕೈ!