ಸಮಾಜವಾದದ ತೊಟ್ಟಿಲಲ್ಲಿ ಈಗ ಎಡ ಬಲ ಪೈಪೋಟಿ ಬಲು ಜೋರು

Public TV
5 Min Read
amulya 5

ಸುಕೇಶ್ ಡಿ.ಎಚ್
ದೊಂದು ಕಾಲವಿತ್ತು ರಾಜ್ಯ ರಾಜಕಾರಣದಲ್ಲಿ ಸಮಾಜವಾದಿಗಳ ಅಬ್ಬರ ಜೋರಿತ್ತು. ಕಾಕತಾಳೀಯ ಎಂಬಂತೆ ಘಟಾನುಘಟಿ ಸಮಾಜವಾದಿ ನಾಯಕರು ಮಲೆನಾಡಿನ ಮಡಿಲಿಂದ ಬಂದು ರಾಜ್ಯ ರಾಜಕಾರಣದ ದಿಕ್ಕು ಬದಲಿಸಿದ್ದರು. ಕಡಿದಾಳು ಮಂಜಪ್ಪ, ಶಾಂತವೀರ ಗೋಪಾಲಗೌಡರು, ವೀರಪ್ಪಗೌಡರು, ಜೆ.ಹೆಚ್.ಪಟೇಲ್, ಹೆಚ್.ಜಿ.ಗೋವಿಂದೇಗೌಡರು, ಕಾಗೋಡು ತಿಮ್ಮಪ್ಪ, ಸಾರೆಕೊಪ್ಪ ಬಂಗಾರಪ್ಪ… ಹೀಗೆ ಸಾಲು ಸಾಲು ಸಮಾಜವಾದಿ ನಾಯಕರನ್ನು ಕೊಟ್ಟ ಮಲೆನಾಡು ಕಳೆದ ಎರಡು ದಶಕಗಳಲ್ಲಿ ಬೇರೆಯದೇ ದಿಕ್ಕಿಗೆ ತಿರುಗಿಕೊಂಡಂತಿದೆ.

SUKESH STRAIGHT HIT

ಪಾಕಿಸ್ತಾನ್ ಜಿಂದಾಬಾದ್ ಅನ್ನೋ ಒಂದೇ ಒಂದು ಕೂಗು ಈಗ ಎಲ್ಲರ ಚಿತ್ತ ಮಲೆನಾಡಿನತ್ತ ಹರಿಯುವಂತೆ ಮಾಡಿದೆ. ಅಮೂಲ್ಯ ಲಿಯೋನಾ ಅನ್ನೋ ಎಳಸು ಹುಡುಗಿಯೊಬ್ಬಳ ದೇಶ ದ್ರೋಹದ ಕೆಲಸ ಅವಳ ಮೂಲ ಯಾವುದು ಅನ್ನೋ ಹುಡುಕಾಟದೊಂದಿಗೆ ಮತ್ತೆ ಮಲೆನಾಡಿನ ಹೆಬ್ಬಾಗಿಲಿಗೆ ಬಂದು ನಿಂತಿದೆ. ಹಾಗೆ ನೋಡಿದರೆ ಕಳೆದ ಎರಡು ದಶಕದಲ್ಲಿ ಎಡ ಪಂಥೀಯರು ಹಾಗೂ ಬಲ ಪಂಥೀಯರು ಇಬ್ಬರ ಪಾಲಿಗೂ ಮಲೆನಾಡು ಸ್ವರ್ಗವಾಗಿ ಕಂಡಿರುವುದು, ಸಮಾಜವಾದದ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಂತೆ ಕಾಣುತ್ತಿದೆ.

ಮಲೆನಾಡ ಮಡಿಲಲ್ಲಿ ನಕ್ಸಲರ ಗುಂಡಿನ ಸದ್ದು ಬಲಪಂಥೀಯರ ದತ್ತ ಪೀಠದ ಕೂಗು ಹೆಚ್ಚು ಕಡಿಮೆ ಒಟ್ಟೊಟ್ಟಿಗೆ ಕೇಳಿಬಂದಿತ್ತು. ಇದೆಲ್ಲದಕ್ಕೆ ಕಳಶವಿಟ್ಟಂತೆ ಮಲೆನಾಡಿನ ದಟ್ಟ ಕಾನನ ಭಯೋತ್ಪಾದಕರ ಶಸ್ತ್ರಾಭ್ಯಾಸಕ್ಕೆ ವೇದಿಕೆಯಾಗಿದೆ ಅನ್ನೋ ಅನುಮಾನದ ನಡುವೆಯೇ ಕೆಲವೇ ವರ್ಷದ ಹಿಂದೆ ಕೊಪ್ಪ ಬಳಿಯ ಹಳ್ಳಿಯಲ್ಲಿ ಭಯೋತ್ಪಾದಕರ ಬಂಧನವು ಆಗಿ ಹೋಯ್ತು. ಬೆಚ್ಚನೆ ಪರಿಸರದ ಮಧ್ಯೆ ಸಮಾಜವಾದದ ಕನವರಿಕೆಯಲ್ಲಿದ್ದ ಮಲೆನಾಡಿಗರಿಗೆ ನಕ್ಸಲ್ ಚಳುವಳಿ ಎಂದರೇನು? ಭಗವಾಧ್ವಜ ಅಂದರೇನು ಅನ್ನೋ ಕಲ್ಪನೆಯೂ ಇರಲಿಲ್ಲ. ಆದರೆ 2000ದ ಸುಮಾರಿಗೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ನಾಲ್ಕು ಜಿಲ್ಲೆ ಗಡಿಭಾಗವಾದ ಆಗುಂಬೆ ಸುತ್ತಮುತ್ತಲಿನ ದಟ್ಟ ಕಾನನದ ನಡುವೆ ನಕ್ಸಲರ ಶಸ್ತ್ರಾಭ್ಯಾಸ ಶುರುವಾಗಿತ್ತು. ಅದೇ ನಾಲ್ಕು ಜಿಲ್ಲೆಗಳನ್ನ ಗುರಿಯಾಗಿಸಿಕೊಂಡು ಚಿಕ್ಕಮಗಳೂರಿನ ಬಾಬಾ ಬುಡಾನ್ ಗಿರಿಯಲ್ಲಿ ಬಲ ಪಂಥೀಯರ ದತ್ತ ಮಾಲಾ ಅಭಿಯಾನ ಅದೇ 2000 ಇಸವಿಯ ಆಜುಬಾಜಲ್ಲಿ ದೊಡ್ಡ ಪ್ರಮಾಣದಲ್ಲಿ ಚಾಲ್ತಿಗೆ ಬಂತು. ಪರಸ್ಪರ ವಿರುದ್ಧವಾದ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಎಡ ಹಾಗೂ ಬಲ ಎರಡು ಪಂಥದವರು ತಮ್ಮದೇ ಆದ ರೀತಿಯಲ್ಲಿ ಮಲೆನಾಡನ್ನು ಆವರಿಸತೊಡಗಿದರು.

CKM NAXAL COMBING AV 5

ಪಶ್ಚಿಮ ಘಟ್ಟದ ಕಾಡಲ್ಲಿ ಸುಲಭವಾಗಿ ರಕ್ಷಣೆ ಪಡೆಯಬಹುದು ಅನ್ನೋ ಒಂದೇ ಒಂದು ಕಾರಣ ಹೊರತುಪಡಿಸಿದರೆ ನಕ್ಸಲರಿಗೆ ಮಲೆನಾಡಿನ ಕಾನನ ಪ್ರವೇಶಕ್ಕೆ ಬೇರೆ ಯಾವುದೇ ಕಾರಣ ಇರಲಿಲ್ಲ. ಯಾವುದೇ ರೀತಿಯ ನೆರವು ಮಲೆನಾಡಿಗರಿಂದ ನಿರೀಕ್ಷೆ ಮಾಡುವಂತಿರಲಿಲ್ಲ. ಜಮೀನ್ದಾರಿಕೆ, ಪಾಳೆಗಾರಿಕೆ ಯಾವುದೂ ಮಲೆನಾಡಿನ ಸಮಸ್ಯೆಯೇ ಆಗಿರಲಿಲ್ಲ. ಕಾಡಿನಷ್ಟೇ ತಣ್ಣಗೆ ಅಲ್ಲಿನ ರೈತಾಪಿ ಜನ ತಮ್ಮ ಪಾಡಿಗೆ ತಾವು ಬದುಕು ಕಟ್ಟಿಕೊಂಡವರು. ಕಾಡು ಬಿಟ್ಟರೆ ಬೇರೆ ಯಾವ ನೆರವು ಸಿಗಲ್ಲ ಅನ್ನೋದು ಖಚಿತವಾದರೂ ಅಲ್ಲಲ್ಲಿ ಗುಂಡಿನ ಸದ್ದು ಮಾಡಿದ ನಕ್ಸಲರು ಕೊನೆಗೆ ತಾವು ಗುಂಡೇಟು ತಿಂದು ಮಲಗಿದರು. ಮಲೆನಾಡಿನಲ್ಲಿ ಎಡಪಂಥೀಯ ರಕ್ತ ಕ್ರಾಂತಿಯ ಕನಸು ಬಹುತೇಕ ಮುಗಿದ ಅಧ್ಯಾಯ. ಅದರ ಪಳೆಯುಳಿಕೆಗಳು ಇದೇ ಅಮೂಲ್ಯ ಲಿಯೋನಳಂತಹ ಶನಿ ಸಂತಾನಗಳು ಕಂಡ ಕಂಡ ವೇದಿಕೆಯಲ್ಲಿ ಮೈಕು ಹಿಡಿದು ಮಾನಸಿಕ ಅಸ್ವಸ್ಥರಂತೆ ಕೂಗತೊಡಗಿದ್ದಾರೆ.

ckm datta jayanti

ಹೆಚ್ಚು ಕಡಿಮೆ ಅದೇ ಸಂದರ್ಭದಲ್ಲಿ ಬಾವುಟ ಕಟ್ಟಲು ಹುಡುಗರಿಲ್ಲದ ಸ್ಥಿತಿಯಲ್ಲಿ ದತ್ತ ಪೀಠದ ಹುಚ್ಚು ಎಬ್ಬಿಸಿದ ಬಜರಂಗದಳ ಅನ್ನೋ ಬಲ ಪಂಥೀಯ ಸಂಘಟನೆ ಎಬ್ಬಿಸಿದ ಹವಾಗೆ 4 ಜಿಲ್ಲೆಗಳು ಕೇವಲ 5 ವರ್ಷದಲ್ಲೆ ಕೇಸರಿಮಯವಾಗಿದ್ದು ಸುಳ್ಳಲ್ಲ. ಅದರ ನೇರ ಲಾಭ ಸಿಕ್ಕಿದ್ದು ಬಿಜೆಪಿಗೆ. ಆ ಎಲ್ಲಾ ಘಟನೆಗಳು ಈಗ ಇತಿಹಾಸ. ಆದರೆ ಒಮ್ಮೆ ದತ್ತ ಪೀಠದ ವಿವಾದವನ್ನು ಇಟ್ಟುಕೊಂಡು ಹಾರಿಸಿದ ಕೇಸರಿ ಬಾವುಟ ದಿನ ಕಳೆದಂತೆ ಸಾಕಷ್ಟು ಎತ್ತರಕ್ಕೆ ಹಾರತೊಡಗಿತು. ಸಹಜವಾಗಿಯೇ ಮಲೆನಾಡು, ಕರಾವಳಿ ಭಾಗದಲ್ಲಿ ಬೀಸಿದ ಗಾಳಿ ರಾಜ್ಯದ ಉದ್ದಗಲಕ್ಕೂ ಪಸರಿಸಿ ಇಡೀ ರಾಜ್ಯ ಬಿಜೆಪಿ ಮಯವಾಯ್ತು.

CKM DATTAPEETA 5

ಕೇಸರಿ ಪತಾಕೆ ಹಾರಿಸಿದ ಬಲಪಂಥೀಯರ ವಿರುದ್ಧ ಸಹಜವಾಗಿಯೇ ಎಡ ಪಂಥೀಯರು, ಪ್ರಗತಿಪರರು ಧ್ವನಿ ಎತ್ತಲು ಮಲೆನಾಡಿನತ್ತ ಬಂದು ಎಡ ಹಾಗೂ ಬಲ ಕದನಕ್ಕೆ ಮತ್ತಷ್ಟು ಖದರು ತಂದುಕೊಟ್ಟರು. ಬಲಪಂಥೀಯ ಧರ್ಮಾಧಾರಿತ ರಾಜಕೀಯ ನಡೆಯನ್ನು ಟೀಕಿಸುವ ಭರದಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಎಡಪಂಥೀಯ ನಾಯಕರು ಬಿಜೆಪಿಯ ಬೇರನ್ನು ಮತ್ತಷ್ಟು ಗಟ್ಟಿಗೊಳಿಸಿದರು. ಎಡಕ್ಕೂ ಇಲ್ಲ, ಬಲಕ್ಕೂ ಇಲ್ಲ ಎಡಬಿಡಂಗಿ ಅಂದುಕೊಂಡಿದ್ದ ಕಾಂಗ್ರೆಸ್ ಅನಿವಾರ್ಯವಾಗಿ ಬಿಜೆಪಿಯನ್ನು ವಿರೋಧ ಮಾಡಲೇಬೇಕಾದ ಸಂಕಷ್ಟಕ್ಕೆ ಸಿಲುಕಿ ಎಡಪಂಥೀಯರ ಜೊತೆ ಕೈ ಜೋಡಿಸಿ ಕೈ ಸುಟ್ಟುಕೊಂಡಿತು. ಅಲ್ಲಿಗೆ ಸಮಾಜವಾದದ ತೊಟ್ಟಿಲಾದ ಮಲೆನಾಡಲ್ಲಿ ಸಮಾಜವಾದವಿರಲಿ ಸಮಾಜದ ಸ್ವಾಸ್ಥ್ಯ ಕಾಪಾಡುವಂತಹ ಯಾವ ಕುರುಹು ಕಾಣದೇ ಎಡಬಲ ಕದನವೇ ಜೋರಾಯಿತು.

baba budangiri dattapeeta

ಬಿಜೆಪಿ ತನ್ನನ್ನು ವಿರೋಧಿಸುವ, ಟೀಕಿಸುವ ಎಲ್ಲರು ಎಡಪಂಥೀಯರು ಅನ್ನೋ ಅಘೋಷಿತ ಕಲ್ಪನೆಯನ್ನು ಮಲೆನಾಡಿಗರ ಮನಸಲ್ಲಿ ಬಿತ್ತುವಲ್ಲಿ ಯಶಸ್ವಿಯಾಗಿದೆ. ಬಿಜೆಪಿಯನ್ನು ರಾಜಕೀಯವಾಗಿ ಎದುರಿಸಬೇಕಾದ ಕಾಂಗ್ರೆಸ್ಸಿಗರು ಎಡಪಂಥೀಯ ಪ್ರತಿನಿಧಿಗಳಂತೆ ಏನೇನೋ ಬಡಬಡಾಯಿಸಿ ಹೇಸಿಗೆ ಮಾಡಿಕೊಳ್ಳತೊಡಗಿದ್ದಾರೆ. ಅಮೂಲ್ಯ ಲಿಯೋನಾಳಂತಹ ನೂರಾರು ತಲೆ ತಿರುಕ ಸೈದ್ಧಾಂತಿಕ ರಾಯಭಾರಿಗಳು ಮಲೆನಾಡಿನ ತೊಟ್ಟಿಲಲ್ಲಿ ಯುದ್ಧ ತಾಯಾರಿ ನಡೆಸಿದರೆ. ಅತ್ತ ಬಲ ಪಂಥೀಯರ ಬತ್ತಳಿಕೆಯಲ್ಲೂ ಸಮಾಜದ ಸ್ವಾಸ್ಥ್ಯಕ್ಕೆ ಬಾಯಲ್ಲೇ ಬೆಂಕಿ ಹಚ್ಚಬಲ್ಲಂತಹ ಹುಚ್ಚು ಹುಡುಗರ ಗುಂಪೇ ಸಿದ್ಧವಾಗಿ ನಿಂತಿದೆ.

chikmagaluru malenadu hill mullayanagiri

ಹಾಗೇ ನೋಡಿದರೆ ಶಾಂತ ಸ್ವಭಾವದ ಮಲೆನಾಡಿಗರ ಮನಸ್ಸಿನ ಆಳದಲ್ಲಿ ಸಮಾಜವಾದದ ಬೇರು ಎಲ್ಲೋ ಟಿಸಿಲೊಡೆಯಲು ಕಾಯುತ್ತಿದೆ. ರಾಜಕೀಯ ಹೊರತಾಗಿ ಸಾಮಾಜಿಕ ಹಾಗೂ ಆರ್ಥಿಕವಾದ ಸಾಕಷ್ಟು ಸಮಸ್ಯೆಗಳು ಮಲೆನಾಡಿಗರ ನೆಮ್ಮದಿ ಕೆಡಿಸಿದೆ. ಸಾಂಪ್ರದಾಯಿಕ ಬೆಳೆ ಅಡಿಕೆಗೆ ಬಂದ ಹಳದಿ ಎಲೆ ಹಾಗೂ ಬೇರು ಹುಳದ ರೋಗ ಮಲೆನಾಡಿಗರ ಅಸ್ತಿತ್ವವನ್ನೆ ಅಲ್ಲಾಡಿಸತೊಡಗಿದೆ. ಒತ್ತುವರಿ ಸಮಸ್ಯೆ, ಹುಲಿಯೋಜನೆ, ಕಸ್ತೂರಿ ರಂಗನ್ ವರದಿ… ಹೀಗೆ ಸಾಲು ಸಾಲು ಸಮಸ್ಯೆಗಳು ಮಲೆನಾಡಿಗರ ಅಸ್ತಿತ್ವವನ್ನೆ ಅಲ್ಲಾಡಿಸುತ್ತಿದ್ದು, ಎಡ ಬಲ ಬಿಟ್ಟು ಭವಿಷ್ಯದ ಚಿಂತೆ ಮಾಡಬೇಕಿದ್ದ ಯುವ ಸಮುದಾಯದ ಕೈಯಲ್ಲಿ ಮೊಬೈಲಿದೆ, ಫ್ರೀ ಇಂಟರ್ ನೆಟ್ ಪ್ಯಾಕೇಜ್ ಇದೆ. ಖಾಲಿ ಕುಳಿತ ಹುಡುಗರ ತಲೆಗೆ ಸೈದ್ಧಾಂತಿಕ ವಿಷ ತುಂಬಲು ತಲೆ ಮಾಸಿದ ನಾಯಕರುಗಳಿದ್ದಾರೆ.

Mullayanagiri 3 copy

ಕುಳಿತ ಮರ ಅಲ್ಲಾಡಿದರೂ ಪರವಾಗಿಲ್ಲ ಹಾರುವ ಮಂಗನಿಗೆ ಹೆಂಡ ಕುಡಿಸಿದರೆ ಎಂತ ಅಲ್ಲಾಡುವ ಮರವನ್ನಾದರೂ ಮಂಗ ಹಾರುತ್ತದೆ ಎಂಬಂತಾಗಿದೆ ಮಲೆನಾಡಿನ ಯುವಕರ ಸ್ಥಿತಿ. ಈ ಮಾನಸಿಕತೆ ಹಾಗೂ ಮಲೆನಾಡಿನಲ್ಲಿ ಕಳೆದ ಎರಡು ದಶಕದಲ್ಲಿ ತಲೆ ಎತ್ತಿದ ವಿಚಿತ್ರ ರಾಜಕೀಯ ಪ್ರಜ್ಞೆ ನಡುವೆಯೇ ಅಮೂಲ್ಯ ಲಿಯೋನಾಳಂತವರು ಹುಚ್ಚಾಟದ ಮಾತನಾಡಿ ದೇಶವೆ ಛೀ… ಥೂ… ಎನ್ನುವಂತೆ ಮಾಡಿದ್ದಾರೆ. ಇನ್ನು ಸಮಾಜವಾದದ ನೆಲದಿಂದ ಎಡ, ಬಲ ಬತ್ತಳಿಕೆಯಿಂದ ಯಾವ್ಯಾವ ಅಸ್ತ್ರಗಳು ಹೊರ ಬರುತ್ತೋ ಗೊತ್ತಿಲ್ಲ. ತಮ್ಮ ಅಸ್ತಿತ್ವವೇ ಅಲ್ಲಾಡುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲೂ ಮಲೆನಾಡಿನ ಹುಡುಗ ಹುಡುಗಿಯರು ಸೈದ್ಧಾಂತಿಕ ಭ್ರಮೆಯಿಂದ ಹೊರ ಬರದಿದ್ದರೆ ಮುಂದೊಂದು ದಿನ ಸೈದ್ಧಾಂತಿಕ ನೆಲಗಟ್ಟಿನಲ್ಲೇ ನಿರಾಶ್ರಿತರ ಗಂಜಿ ಕೇಂದ್ರದ ಖಾಯಂ ಗಿರಿಕಿಗಳಾಗಬೇಕಾದ ಅನಿವಾರ್ಯತೆ ಸೃಷ್ಟಿಯಾದರೂ ಆಶ್ಚರ್ಯ ಪಡಬೇಕಿಲ್ಲ.

[ಮೇಲಿನ ಲೇಖನದಲ್ಲಿ ಪ್ರಕಟವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ]

Share This Article
Leave a Comment

Leave a Reply

Your email address will not be published. Required fields are marked *