ಮೈಸೂರು: ಒಂದೆಡೆ ನಗರದ ಹೊರ ವಲಯದಲ್ಲಿ ಜೋಡಿ ಚಿರತೆ ಕಾಣಿಸಿಕೊಂಡಿದ್ದರೆ, ಇನ್ನೊಂದೆಡೆ ಭಾರೀ ಗಾತ್ರದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.
ಮೈಸೂರಿನ ಹೊರ ವಲಯದ ಬಿ.ಇ.ಎಂ.ಎಲ್ ಆವರಣದಲ್ಲಿ ಮತ್ತೆ ಚಿರತೆಗಳು ಕಾಣಿಸಿಕೊಂಡಿವೆ. ಜಿಲ್ಲೆಯ ಹೂಟಗಳ್ಳಿಯಲ್ಲಿರುವ ಬಿಇಎಂಎಲ್‍ನ ಕಚೇರಿ ನೂರಾರು ಎಕ್ರೆ ವಿಸ್ತೀರ್ಣದಲ್ಲಿದೆ. ಈಗಾಗಲೇ ಬಿ.ಇ.ಎಂ.ಲ್ ಆವರಣದಲ್ಲಿ ಸಾಕಷ್ಟು ಚಿರತೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಕೆಲ ದಿನಗಳ ಹಿಂದೆ ಸಂಸ್ಥೆಯ ಆವರಣದಲ್ಲಿ ಒಟ್ಟಿಗೆ ಎರಡು ಚಿರತೆಗಳು ಕಾಣಿಸಿಕೊಂಡಿದ್ದವು.
Advertisement
Advertisement
ಈ ವೇಳೆ ಬಿ.ಇ.ಎಂ.ಎಲ್ ಭದ್ರತಾ ಸಿಬ್ಬಂದಿ ಮೊಬೈಲ್‍ನಲ್ಲಿ ಚಿರತೆಗಳ ದೃಶ್ಯ ಸೆರೆ ಹಿಡಿದಿದ್ದರು. ನಂತರ ಅರಣ್ಯ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ, ಚಿರತೆ ಸೆರೆಗೆ ಬೋನು ಇಟ್ಟಿತ್ತು. ಈಗ ಮತ್ತೆ ಜೋಡಿ ಚಿರತೆಗಳು ಪ್ರತ್ಯಕ್ಷವಾಗಿವೆ. ಒಂದು ಚಿರತೆ ಗರ್ಭಿಣಿಯಾಗಿರಬಹುದು, ಹೀಗಾಗಿ ಪದೇ ಪದೇ ಚಿರತೆಗಳು ಕಾಣಿಸಿಕೊಳ್ಳುತ್ತಿದೆ ಎಂದು ಊಹಿಸಲಾಗಿದೆ. ಹೀಗೆ ಪದೇ ಪದೇ ಕಚೇರಿ ಆವರಣದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದು ಇಲ್ಲಿನ ಭದ್ರತಾ ಸಿಬ್ಬಂದಿಯ ಆತಂಕ ಹೆಚ್ಚಿಸಿದೆ.
Advertisement
Advertisement
ಇತ್ತ ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಸರಗೂರಿನಲ್ಲಿ ಭಾರೀ ಗಾತ್ರದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಸರಗೂರಿನ ನಿವಾಸಿ ಅರವಿಂದ್ ಅವರ ತೆಂಗಿನ ತೋಟದಲ್ಲಿ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಬೋನು ಇಟ್ಟಿತ್ತು. ಮಂಗಳವಾರ ತಡ ರಾತ್ರಿ ಈ ಬೋನಿಗೆ ಚಿರತೆ ಬಿದ್ದಿದ್ದು, ಈ ಬಗ್ಗೆ ತಿಳಿದ ಬಳಿಕ ಚಿರತೆ ನೋಡಲು ಸ್ಥಳೀಯರು ಮುಗಿ ಬಿದ್ದಿದ್ದರು.