ಮುಂಬೈ: ಪದೇ ಪದೇ ನಮ್ಮನ್ನು ಭೇಟಿ ಮಾಡಲು ಮುಂಬೈಗೆ ಬಂದು ನಮ್ಮ ಶಾಂತಿಯನ್ನು ಕೆಡಿಸುತ್ತಿದ್ದಾರೆ ಎಂದು ಮನವೊಲಿಕೆಗೆ ಬರುತ್ತಿರುವ ಹಿರಿಯ ನಾಯಕರ ವಿರುದ್ಧ ರೆಬೆಲ್ ಶಾಸಕರು ಕಿಡಿಕಾರಿದ್ದಾರೆ.
ಮೈತ್ರಿ ಪಕ್ಷದ ಹಿರಿಯ ನಾಯಕರು ಇಂದು ಮುಂಬೈ ತೆರಳಿ ಅತೃಪ್ತರ ಮನ ಓಲೈಸುವ ಕಾರ್ಯ ಮಾಡುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮುಂಬೈ ನಗರಿ ಮತ್ತೊಂದು ಹೈಡ್ರಾಮಾಕ್ಕೆ ವೇದಿಕೆ ಅಗುತ್ತಾ ಎಂಬ ಪ್ರಶ್ನೆ ಹುಟ್ಟುಕೊಂಡಿದೆ.
ಯಾಕೆಂದರೆ ಪದೇ ಪದೇ ನಮ್ಮನ್ನು ಭೇಟಿ ಮಾಡಲು ಮುಂಬೈಗೆ ಬಂದು ನಮ್ಮ ಶಾಂತಿ ಕದಡುತ್ತಿದ್ದಾರೆಂದು ಅತೃಪ್ತರು ದೂರಿದ್ದು, ಅವರಿಂದ ನಮಗೆ ಜೀವಬೆದರಿಕೆಯಿದೆ ಹೀಗಾಗಿ ರಕ್ಷಣೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಅದರಲ್ಲೂ ಕಾಂಗ್ರೆಸ್ ಪಕ್ಷದ 10 ಶಾಸಕರು ತಮ್ಮ ಪಕ್ಷದ ಹಿರಿಯ ನಾಯಕರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಗುಲಾಂನಬಿ ಆಜಾದ್ ನಮ್ಮನ್ನು ಭೇಟಿ ಮಾಡಲು ಬರಲಿದ್ದಾರೆ. ನಮಗೆ ಯಾರನ್ನೂ ಭೇಟಿ ಮಾಡುವುದು ಇಷ್ಟವಿಲ್ಲವೆಂದು ಅತೃಪ್ತ ಶಾಸಕರು ಸ್ಥಳೀಯ ಠಾಣೆ ಮೂಲಕ ಮುಂಬೈ ಪೊಲೀಸ್ ಕಮೀಷನರ್ ಗೆ ಪತ್ರ ಬರೆದಿದ್ದಾರೆ.
ಸೂಕ್ತ ಭದ್ರತೆ ನೀಡುವಂತೆ ಅತೃಪ್ತರು ಮಹಾರಾಷ್ಟ್ರ ಪೊಲೀಸರಿಗೆ ಮನವಿ ಮಾಡಿದ್ದು, ಸುಪ್ರೀಂಕೋರ್ಟ್ ಗೂ ಸಹ ಇಂದು ಮನವಿ ಸಲ್ಲಿಸಲು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.