ನನ್ನ ನಿಲುವು ಸ್ಪಷ್ಟ, ನಾನು ಬಿಜೆಪಿಗೆ ಹೋಗಲ್ಲ: ಲಕ್ಷ್ಮಣ್ ಸವದಿ ಸ್ಪಷ್ಟನೆ

Public TV
2 Min Read
LAXMAN SAVADI 1

– ಶೆಟ್ಟರ್ ಯಾಕೆ ಬಿಜೆಪಿಗೆ ಹೋಗಿದ್ದಾರೆ ಗೊತ್ತಿಲ್ಲ

ಬೆಂಗಳೂರು: ನನ್ನ ನಿಲುವು ಸ್ಪಷ್ಟ. ನಾನು ಬಿಜೆಪಿಗೆ ಹೋಗಲ್ಲ ಎಂದು ಶಾಸಕ ಲಕ್ಷ್ಮಣ್ ಸವದಿ (Laxman Savadi) ಹೇಳಿದ್ದಾರೆ.

ಜಗದೀಶ್ ಶೆಟ್ಟರ್ (Jagadish Shettar) ಬೆನ್ನಲ್ಲೇ ಸವದಿ ಕೂಡ ಬಿಜೆಪಿ ಸೇರುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು, ಅವರು ಒಟ್ಟಿಗೆ ನಿರ್ಧಾರ ಮಾಡಿರಲಿಲ್ಲ. ನಾನು ಮೊದಲು ಕಾಂಗ್ರೆಸ್‍ಗೆ ಬಂದೆ. ಟಿಕೆಟ್ ಸಿಗದ ಕಾರಣ ಅವರು ನಂತರ ಬಂದರು. ಯಾಕೆ ಹೋಗಿದ್ದಾರೆ ಅಂತ ಗೊತ್ತಿಲ್ಲ, ಅವರನ್ನೇ ಕೇಳಬೇಕು. ನನ್ನನ್ನ ಬಿಜೆಪಿ ಸಂಪರ್ಕ ಮಾಡಿಲ್ಲ, ಆ ಪ್ರಶ್ನೆಯೇ ಇಲ್ಲ. ಬಿಜೆಪಿಗೆ ಲೋಕಸಭೆ ಅಗತ್ಯ, ಅನಿವಾರ್ಯ ಇದೆ. ಹಾಗಾಗಿ ಎಲ್ಲರನ್ನ ಸಂಪರ್ಕ ಮಾಡುತ್ತಿದ್ದಾರೆ. ನಾನು ಎಲ್ಲೂ ಹೋಗಲ್ಲ. ಇದು ನನ್ನ ತೀರ್ಮಾನ ಎಂದರು.

ರಾಷ್ಟ್ರೀಯ ಪಕ್ಷಗಳು ಬ್ಯಾಲೆನ್ಸ್ ಆಗಿರುತ್ತೆ. ನನ್ನಿಂದಲೇ ಎಲ್ಲಾ ಆಗುತ್ತೆ ಅನ್ನೋಕೆ ಆಗಲ್ಲ. ಶೆಟ್ಟರ್ ಹೋಗಿರೋದು ದೊಡ್ಡ ಬದಲಾವಣೆ ಆಗೋದಿಲ್ಲ ಅನಿಸುತ್ತೆ. ಶೆಟ್ಟರ್ ವೈಯಕ್ತಿಕ ವಿಚಾರವಾಗಿ ನಿರ್ಧಾರ ಮಾಡಿದ್ದಾರೆ. ನನ್ನ ನಿರ್ಧಾರ ಸ್ಪಷ್ಟವಾಗಿದೆ. ನಾನು ಎಲ್ಲೂ ಹೋಗಲ್ಲ ಎಂದರು. ಇದನ್ನೂ ಓದಿ: ಇಲ್ಲಿಯವರೆಗೆ ಸಹಕಾರ ಕೊಟ್ಟಿದ್ದಕ್ಕೆ ಡಿಕೆಶಿ, ಸಿಎಂಗೆ ಧನ್ಯವಾದ ಸಲ್ಲಿಸಿದ್ರು ಶೆಟ್ಟರ್

ಅವರ ನಿರ್ಧಾರ ಗೊತ್ತಿಲ್ಲ: ಈಗ ಯಾಕೆ ಬಿಜೆಪಿಗೆ ಹೋಗಿದ್ದಾರೆ ಅಂತ ಗೊತ್ತಿಲ್ಲ. ನಾನು ಅವರು ಸ್ನೇಹಿತರು. ದಿನ ನಾವಿಬ್ಬರು ಮಾತನಾಡುತ್ತೇವೆ. ಆದರೆ ಅವರು ಈ ನಿರ್ಧಾರ ಮಾಡ್ತಾರೆ ಅಂತ ಗೊತ್ತಿರಲಿಲ್ಲ. ಲೋಕಸಭೆ ಚುನಾವಣಾ (Loksabha Election) ಹಿನ್ನೆಲೆ ಅವರಿಗೆ ನಮ್ಮ ಅನಿರ್ವಾಯತೆ ಇದೆ. ಹಾಗಾಗಿ ಸಂಪರ್ಕ ಮಾಡ್ತಾ ಇದ್ದಾರೆ ಎಂದ ಅವರು, ಸಚಿವ ಸ್ಥಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ಈಗ ಮಾತನಾಡೋದು ಸೂಕ್ತ ಅಲ್ಲ. ಪಕ್ಷ ಏನು ಹೇಳುತ್ತೋ ಅದನ್ನ ಮಾಡುತ್ತೇನೆ ಎಂದು ಹೇಳಿದರು.

ಇದೇ ವೇಳೆ ಬುಧವಾರ ಸಿಎಂ ಭೇಟಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕ್ಷೇತ್ರದ ಅನುದಾನ ವಿಚಾರವಾಗಿ ಭೇಟಿಯಾಗಿದ್ದೆ. ಕೃಷಿ ಕಾಲೇಜಿನ ಬಗ್ಗೆ ಬಜೆಟ್ ನಲ್ಲಿ ಅನುದಾನ ಬಿಡುಗಡೆ ಸಂಬಂಧ ಚರ್ಚಿಸಲು ಹೋಗಿದ್ದೆ. ಬೇರೆ ರಾಜಕೀಯ ಚರ್ಚೆ ಇಲ್ಲ. ದೆಹಲಿಗೆ ಹೋಗುವುದಾದರೆ ಹೇಳಿಯೇ ಹೋಗುತ್ತೇನೆ. ಎಂದರು.

Share This Article