ಚಿತ್ರದುರ್ಗ: ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮಾತಿಗೆ ಈಗ ಡಿಸಿಎಂ ಸವದಿ ದನಿಗೂಡಿಸಿದ್ದಾರೆ. ಬಿಎಂಟಿಸಿ, ಕೆಎಸ್‍ಆರ್ ಟಿಸಿಯ ಚಾಲಕ-ನಿರ್ವಾಹಕರಿಗೆ ಇನ್ನೂ ಸಂಬಳ ಆಗಿಲ್ಲ. ಕೇವಲ ಅಧಿಕಾರಿಗಳಿಗೆ ಮಾತ್ರ ಆಗಿದ್ದು, ಹಬ್ಬದಲ್ಲಿ ಬೋನಸ್, ಸ್ವೀಟ್ಸ್ ನಿರೀಕ್ಷೆಯಲ್ಲಿದ್ದ ಶ್ರಮಿಕ ವರ್ಗಕ್ಕೆ ಶಾಕ್ ಆಗಿದೆ.
ಈ ಬಗ್ಗೆ ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ್ ಸವದಿ ಅವರು, ಸಾರಿಗೆ ನೌಕರರ ಕ್ಷಮೆಯಾಚಿಸಿದರು. ಹಬ್ಬಕ್ಕೆ ಮುಂಚಿತವಾಗಿ ಸಂಬಳ ನೀಡಬೇಕಿತ್ತು. ಆದರೆ ಸಾರಿಗೆ ನಿಗಮದಲ್ಲಿ ಹಣದ ಕೊರತೆ ಇದ್ದು, ಅ.9ಕ್ಕೆ ಸಂಬಳ ಸಂದಾಯ ಮಾಡುತ್ತೇವೆ. ಹುಬ್ಬಳ್ಳಿ, ಕಲಬುರಗಿ ವಿಭಾಗದಲ್ಲಿ ಸಂಬಳ ತಡವಾಗಿದೆ. ಚಾಲಕ, ನಿರ್ವಾಹಕರು ಸಹಕಾರ ನೀಡಲು ಮನವಿ ಮಾಡುತ್ತೇನೆ ಎಂದರು.
Advertisement
Advertisement
ಇದೇ ವೇಳೆ ಬಿಜೆಪಿ ನಾಯಕರ ಸಭೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಎಸ್‍ವೈ ಪ್ರಶ್ನಾತೀತ ನಾಯಕರಾಗಿದ್ದು, ಈಗಲೂ ಯಡಿಯೂರಪ್ಪ ನಮ್ಮ ನಾಯಕರು, ಮುಂದೆಯೂ ನಾಯಕರು. ಅವರ ಕೈ ಬಲಪಡಿಸುವ ಕಾರ್ಯ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಕೇಂದ್ರದಿಂದ ಹೆಚ್ಚಿನ ನೆರೆ ಪರಿಹಾರದ ಸಿಗುವ ವಿಶ್ವಾಸವಿದೆ ಎಂದರು.