ಒಟ್ಟಾವಾ: ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೆನಡಾದಲ್ಲಿ ದಾಳಿ ನಡೆಸಿದೆ. ಭಾರತೀಯ ಮೂಲದ ಅಬಾಟ್ಸ್‌ಫೋರ್ಡ್ ಕೈಗಾರಿಕೋದ್ಯಮಿಯೊಬ್ಬರ ಹತ್ಯೆ ಮತ್ತು ಪಂಜಾಬಿ ಗಾಯಕನ ಮನೆಯ ಮೇಲೆ ಗುಂಡು ಹಾರಿಸಿದ ಹೊಣೆಯನ್ನು ಈ ಗ್ಯಾಂಗ್ ಹೊತ್ತುಕೊಂಡಿದೆ.
ರಾಜಸ್ಥಾನದ ಪೊಲೀಸರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸಕ್ರಿಯ ಸದಸ್ಯ ಜಗದೀಪ್ ಸಿಂಗ್ ಅಲಿಯಾಸ್ ಜಗ್ಗಾನನ್ನು ಅಮೆರಿಕದಲ್ಲಿ ಬಂಧಿಸಿದ್ದರು. ಅದರ ಬೆನ್ನಲ್ಲೇ ಈ ಎರಡು ದಾಳಿಗಳು ನಡೆದಿವೆ. ಬಿಷ್ಣೋಯ್ ಗ್ಯಾಂಗ್ ಸದಸ್ಯ ಗೋಲ್ಡಿ ಧಿಲ್ಲೋನ್, ಭಾರತೀಯ ಮೂಲದ ಕೈಗಾರಿಕೋದ್ಯಮಿ ದರ್ಶನ್ ಸಿಂಗ್ ಸಹಸಿ ಅವರ ಹತ್ಯೆಯ ಹಿಂದೆ ಈ ಗುಂಪಿನ ಕೈವಾಡವಿದೆ ಎಂದು ಹೇಳಿದ್ದಾರೆ.
68 ವರ್ಷದ ದರ್ಶನ್ ಸಿಂಗ್ ದೊಡ್ಡ ಮಾದಕವಸ್ತು ವ್ಯವಹಾರದಲ್ಲಿ ಭಾಗಿಯಾಗಿದ್ದರು. ಈ ಗ್ಯಾಂಗ್ ಅವರಿಂದ ಹಣಕ್ಕೆ ಬೇಡಿಕೆ ಇಟ್ಟಿತ್ತು. ಹಣ ಸಿಗದ ಕಾರಣ, ಗ್ಯಾಂಗ್ ಆತನನ್ನು ಹತ್ಯೆ ಮಾಡಿದೆ ಎನ್ನಲಾಗಿದೆ.
ಸೋಮವಾರ ಬೆಳಗ್ಗೆ ಬ್ರಿಟಿಷ್ ಕೊಲಂಬಿಯಾದ ಅಬಾಟ್ಸ್‌ಫೋರ್ಡ್‌ನಲ್ಲಿರುವ ಅವರ ಮನೆಯ ಹೊರಗೆ ಉದ್ಯಮಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ಸಿಂಗ್ ಹೊರಗೆ ಬರುವುದನ್ನೇ ಕಾದು ನಂತರ ಹತ್ಯೆ ಮಾಡಲಾಗಿದೆ.
ಪೊಲೀಸರು ಸ್ಥಳಕ್ಕೆ ಬಂದಾಗ ಉದ್ಯಮಿ ಗಂಭೀರ ಸ್ಥಿತಿಯಲ್ಲಿದ್ದರು. ದರ್ಶನ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


