ನವದೆಹಲಿ: ಪುಲ್ವಾಮಾ ಭಯೋತ್ಪಾದಕರ ದಾಳಿಯಲ್ಲಿ ಸುಮಾರು 40 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಅವರ ಕುಟುಂಬದವರಿಗೆ ಸರ್ಕಾರ ಸೇರಿದಂತೆ ನಟರು, ನಿರ್ಮಾಪಕರು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಈಗ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಭಾರತೀಯ ಸೈನಿಕರಿಗೆ 1 ಕೋಟಿ ರೂ. ಅನುದಾನ ನೀಡಲು ನಿರ್ಧರಿಸಿದ್ದಾರೆ.
ಲತಾ ಮಂಗೇಶ್ಕರ್ ಅವರು ತಮ್ಮ ತಂದೆ ಮಾಸ್ಟರ್ ದಿನನಾಥ್ ಮಂಗೇಶ್ಕರ್ ಅವರ ಪುಣ್ಯ ಸ್ಮರಣೆಯ ದಿನವಾದ ಏಪ್ರಿಲ್ 24 ರಂದು ಭಾರತೀಯ ಸೈನಿಕರಿಗೆ 1 ಕೋಟಿ ರೂ. ಅನುದಾನ ನೀಡಲಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ.
“ನಮ್ಮ ಚಿತ್ರೋದ್ಯಮದಲ್ಲಿ ಅನೇಕರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ ಹುತಾತ್ಮರಾದ ಯೋಧರ ಕುಟುಂಬದವರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಹೀಗಾಗಿ ನಾನು ಕೂಡ ನಮ್ಮ ದೇಶಕ್ಕೆ ಸೇವೆ ಸಲ್ಲಿಸಲು ತಮ್ಮ ಜೀವವನ್ನು ತ್ಯಾಗ ಮಾಡಿದ ಭಾರತೀಯ ಸೈನಿಕರಿಗೆ ನನ್ನ ತಂದೆಯ ಪುಣ್ಯಸ್ಮರಣೆಯ ದಿನ 1 ಕೋಟಿ ರೂ. ಹಣವನ್ನು ಭಾರತೀಯ ಸೇನೆಗೆ ನೀಡಲಿದ್ದೇನೆ” ಎಂದು ಹೇಳಿದ್ದಾರೆ.
ಈ ಹಿಂದೆ ಭಯೋತ್ಪಾದರಕ ದಾಳಿಯಲ್ಲಿ ವೀರಮರಣ ಹೊಂದಿದ್ದ ಯೋಧರಿಗಾಗಿ ಸಂತಾಪ ಸೂಚಿಸಿದ್ದರು. ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಕೂಡ ತಲಾ ಒಬ್ಬ ಯೋಧ ಕುಟುಂಬದವರಿಗೆ 5 ಲಕ್ಷ ನೀಡಿದ್ದಾರೆ. ಇನ್ನೂ ‘ಉರಿ’ ಚಿತ್ರತಂಡ ಕೂಡ ಒಂದು ಕೋಟಿ ರೂ. ಸಹಾಯ ಧನ ನೀಡಿದೆ. ಇವರಷ್ಟೆ ಅಲ್ಲದೇ ಅನೇಕರು ಯೋಧರ ಕುಟುಂಬದವರಿಗೆ ಸಹಾಯ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv