ಭಾರೀ ಸಂಖ್ಯೆಯಲ್ಲಿ ಜ್ಞಾನವಾಪಿ ಮಸೀದಿಗೆ ಆಗಮಿಸಿ ನಮಾಜ್‌ ಮಾಡಿದ ಮುಸ್ಲಿಮರು

Public TV
1 Min Read
Gyanvapi Mosque

ಲಕ್ನೋ: ಶುಕ್ರವಾರ ವಾರಣಾಸಿಯ ಜ್ಞಾನವಾಪಿ ಮಸೀದಿಗೆ (Gyanvapi Mosque) ಭಾರೀ ಸಂಖ್ಯೆಯಲ್ಲಿ ಮುಸ್ಲಿಮರು (Muslims) ಆಗಮಿಸಿ ನಮಾಜ್‌ (Namaz) ಮಾಡಿದ್ದಾರೆ.

ಮಸೀದಿಯ ನೆಲ ಮಹಡಿಯಲ್ಲಿರುವ ಮೂರ್ತಿಗಳಿಗೆ ಪೂಜೆ ಮಾಡಲು ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿದ ಬೆನ್ನಲ್ಲೇ ಇಂದು ಮುಸ್ಲಿಮ್‌ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಬಂದ್ ಆಚರಿಸಲಾಗಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಜನರು ಪ್ರಾರ್ಥನೆ ಸಲ್ಲಿಸಿದ್ದಾರೆ.

GYANVAPI MOSQUE

ಬಿಗಿ ಭದ್ರತೆಯ ನಡುವೆ ಶುಕ್ರವಾರ ನಮಾಜ್ ಶಾಂತಿಯುತವಾಗಿ ನಡೆಯಿತು. ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ ಹಿನ್ನೆಲೆಯಲ್ಲಿ ಇತರ ಮಸೀದಿಗೆ ತೆರಳಿ ಪ್ರಾರ್ಥನೆ ಮಾಡುವಂತೆ ಸೂಚಿಸಲಾಯಿತು.

ಶುಕ್ರವಾರ ನಮಾಜ್‌ಗೆ ಸಾಮಾನ್ಯವಾಗಿ ಸೇರುವ ಜನರ ಸಂಖ್ಯೆಗಿಂತ ದುಪ್ಪಟ್ಟು ಜನ ಇಂದು ಆಗಮಿಸಿದ್ದರು ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಜ್ಞಾನವಾಪಿ ಮಸೀದಿಯ ವ್ಯವಹಾರ ನೋಡಿಕೊಳ್ಳುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಶುಕ್ರವಾರ ಪಟ್ಟಣದಲ್ಲಿ ಬಂದ್‌ಗೆ ಕರೆ ನೀಡಿತ್ತು. ನಗರದ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿನ ಅಂಗಡಿಗಳು ದಿನವಿಡೀ ಮುಚ್ಚಲ್ಪಟ್ಟಿದ್ದವು.  ಇದನ್ನೂ ಓದಿ: ಜ್ಞಾನವಾಪಿಯಲ್ಲಿ ಪೂಜೆಗೆ ತಡೆ ನೀಡಲ್ಲ- ಮುಸ್ಲಿಂ ಸಮಿತಿ ಮನವಿ ತಿರಸ್ಕರಿಸಿದ ಹೈಕೋರ್ಟ್‌

ಕೋರ್ಟ್‌ ಆದೇಶದ ನಂತರ ಮಸೀದಿ ಸುತ್ತ ಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇಡೀ ಪಟ್ಟಣದಲ್ಲಿ ಪರಿಸ್ಥಿತಿಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಜ್ಞಾನವಾಪಿ ಮಸೀದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಗಾ ಇರಿಸಲು ಡ್ರೋನ್‌ಗಳ ಸಹಾಯವನ್ನು ತೆಗೆದುಕೊಳ್ಳಲಾಗುತ್ತಿದೆ.

ಅಹಿತಕರ ಘಟನೆ ನಡೆಯದಂತೆ ನೆರೆಯ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಪಡೆಯನ್ನು ಸಜ್ಜುಗೊಳಿಸಲಾಗಿದೆ. ಕಾಶಿ ವಿಶ್ವನಾಥ ಧಾಮ ಮತ್ತು ಸಮೀಪದ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಕ್ಷಿಪ್ರ ಪೊಲೀಸ್ ಪಡೆ (ಆರ್‌ಪಿಎಫ್) ನಿಯೋಜಿಸಲಾಗಿದೆ.

 

Share This Article