ಶಿವಮೊಗ್ಗ: ಮಲೆನಾಡಿನಾದ್ಯಂತ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಕಾರ್ಗಲ್ – ಜೋಗ ರಾಜ್ಯ ಹೆದ್ದಾರಿ ಬಂದ್ ಆಗಿದೆ.
ಶಿವಮೊಗ್ಗ ಜಿಲ್ಲೆಯಾದ್ಯಂತ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ಮಳೆ ಹೆಚ್ಚಾಗುತ್ತಿದ್ದಂತೆ, ನೆರೆ, ಭೂಕುಸಿತ ಹೆಚ್ಚಾಗುತ್ತಿದೆ. ಹೀಗಾಗಿ ಸಾರ್ವಜನಿಕರಲ್ಲಿ ತೀವ್ರ ಭೀತಿ ಶುರುವಾಗಿದೆ. ಸಾಗರ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಮಲೆನಾಡಿನಾದ್ಯಂತ ಭೂಕುಸಿತದ ಭೀತಿ ಎದುರಾಗುತ್ತಿದೆ. ಇನ್ನೂ ಹಲವೆಡೆ ರಸ್ತೆಗೆ ಮಣ್ಣು ಕುಸಿದು ಬಿದ್ದಿದ್ದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಭೂ ಕುಸಿತದಿಂದ ಕಾರ್ಗಲ್ ಹಾಗೂ ಜೋಗದ ನಡುವಿನ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಲಾಗಿದ್ದು, ವಾಹನ ಸಾವರರು ಪರದಾಡುವಂತಾಗಿದೆ. ಭೂ ಕುಸಿತದಿಂದಾಗಿ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗುರುಳಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.
ಚೂರಿಕಟ್ಟೆ ಮೂಲಕ ಜೋಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಹ ಬಂದ್ ಆಗಿದ್ದು, ಜೋಗಕ್ಕೆ ತೆರಳುವ ಪ್ರವಾಸಿಗರಿಗೆ ತಾಳಗುಪ್ಪ ಮಾರ್ಗವಾಗಿ ತೆರಳುವಂತೆ ಸೂಚನೆ ನೀಡಲಾಗಿದೆ. ಸಾಗರ ತಾಲೂಕು ಅರಳಗೋಡ ಬಳಿ ಸುಮಾರು ನಾಲ್ಕು ಹೆಕ್ಟೇರ್ ನಷ್ಟು ವಿಶಾಲ ಗುಡ್ಡ ಕುಸಿದಿದ್ದು, ತೋಟ, ಗದ್ದೆಗಳಲ್ಲಿ ಸಂಪೂರ್ಣವಾಗಿ ಮಣ್ಣು ತುಂಬಿಕೊಂಡಿದೆ. ಒಂದುಕಡೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಮೀತಿ ಮೀರಿದ್ದರೆ, ಇತ್ತ ಮಲೆನಾಡಿನಲ್ಲಿಯೂ ಸಹ ಮಳೆಯಿಂದ ಭೂ ಕುಸಿತ ಹೆಚ್ಚಾಗಿ ಸಂಚಾರ ಅಸ್ತವ್ಯಸ್ತವಾಗುತ್ತಿದೆ.