ಬೆಂಗಳೂರು: ವರ್ಷದ ಹಿಂದೆಯಷ್ಟೇ ಕಂಡುಕೇಳರಿಯದ ಪ್ರವಾಹಕ್ಕೆ ಬೆಚ್ಚಿಬಿದ್ದು ಚೇತರಿಸಿಕೊಳ್ಳುತ್ತಿರುವ ಕೇರಳ ಮತ್ತೆ ಪ್ರಳಯಕ್ಕೆ ಬೆಚ್ಚಿಬಿದ್ದಿದೆ. ಕರ್ನಾಟಕದೊಂದಿಗೆ ಗಡಿ ಹಂಚಿಕೊಳ್ಳುವ ವಯನಾಡು ಜಿಲ್ಲೆಯ ಮೆಪ್ಪಾಡಿಯ ಪುಥುಮಲದಲ್ಲಿ ಗುಡ್ಡ ಕುಸಿತದಿಂದಾದ ಪ್ರವಾಹಕ್ಕೆ ಊರಿಗೆ ಊರೇ ಕಣ್ಮರೆ ಆಗಿದ್ದು, ದೇವಸ್ಥಾನ ಮತ್ತು ಮಸೀದಿಯೊಂದು ಸಾಕ್ಷ್ಯವೇ ಇಲ್ಲದಂತೆ ನೆಲಸಮವಾಗಿದೆ.
ಪುಥಮಲದಲ್ಲಿದ್ದ ಮನೆ ಮತ್ತು ಎರಡು ಕಾಟೇಜ್‍ಗಳು ಕೂಡಾ ಕೊಚ್ಚಿಕೊಂಂಡು ಹೋಗಿವೆ. ಈ ಕಾಟೇಜ್‍ಗಳಲ್ಲಿರುವ ಟೀ ಎಸ್ಟೇಟ್ ಕಾರ್ಮಿಕರೂ ಕಣ್ಮರೆ ಆಗಿದ್ದಾರೆ. 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಶಂಕೆ ಎದುರಾಗಿದೆ. ಇತ್ತ ವಯನಾಡಿಯಲ್ಲಿ ನೋಡನೋಡ್ತಿದ್ದಂತೆ ಮನೆಯೊಂದು ಬಿದ್ದಿದೆ.
ಇತ್ತ ಉತ್ತರ ಕೇರಳದ ಜಿಲ್ಲೆಗಳಲ್ಲಿ ಮಳೆ ಕಟ್ಟೆಚ್ಚರ ಘೋಷಿಸಲಾಗಿದೆ. ತ್ರಿಶೂರು, ಮಲಪ್ಪುರಂ, ಕೊಯಿಕ್ಕೋಡ್, ವಯನಾಡು, ಕಾಸರಗೋಡು, ಎರ್ನಾಕುಲಂ, ಇಡುಕ್ಕಿ, ಕಣ್ಣೂರು, ಪಾಲಕ್ಕಾಡ್‍ನಲ್ಲಿ ಗಂಟೆಗೆ 40-50 ಕಿಮೀ ವೇಗದಲ್ಲಿ ಬಿರುಗಾಳಿ ಸಹಿತ ಮಳೆ ಬರುವ ಮುನ್ಸೂಚನೆ ನೀಡಲಾಗಿದೆ. ಈ ಭಾಗದ ಡ್ಯಾಂಗಳು ಮತ್ತು ಚೆಕ್ ಡ್ಯಾಂಗಳಿಂದ ಅಪಾರ ಪ್ರಮಾಣದಲ್ಲಿ ನೀರನ್ನ ಹೊರಬಿಡಲಾಗ್ತಿದ್ದು ಮನೆ, ತೋಟ, ಹೊಲ ಗದ್ದೆ, ರಸ್ತೆಗಳೆಲ್ಲ ಜಲಾವೃತಗೊಂಡಿವೆ.