ಬೆಂಗಳೂರು: ಮಲೆನಾಡಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತವಾಗಿದೆ. ಮಲೆನಾಡ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಮತ್ತೆ ಎರಡು ದಿನಗಳ ಕಾಲ ರಜೆಯನ್ನು ವಿಸ್ತರಿಸಲಾಗಿದೆ.
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿದಿದ್ದು, ಮಲೆಯ ಮಾರುತ ಬಳಿ ಗುಡ್ಡ ಕುಸಿಯುತ್ತಿದೆ. ಪದೇ ಪದೆ ಗುಡ್ಡ ಕುಸಿಯುತ್ತಿರುವ ಕಾರಣ ವಾಹನ ಸವಾರರು ಪರದಾಡುವಂತಾಗಿದ್ದು, ಕುಸಿದ ಮಣ್ಣನ್ನು ತೆರವುಗೊಳಿಸುವ ಕಾರ್ಯವು ಸಹ ಅಷ್ಟೇ ಭರದಿಂದ ಸಾಗಿದೆ. ಧಾರಾಕಾರ ಮಳೆಯಾಗಿ ಘಾಟ್ ರಸ್ತೆಯಲ್ಲಿ ಅಲ್ಲಲ್ಲಿ ಕುಸಿತ ಕಂಡಿರುವುದರಿಂದ 2 ದಿನಗಳ ಕಾಲ ಚಾರ್ಮಾಡಿ ಘಾಟ್ ರಸ್ತೆ ಸಂಚಾರ ಸ್ಥಗಿತಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಮಾಡಿದ್ದಾರೆ.
Advertisement
Advertisement
ಕಾಫಿನಾಡಲ್ಲಿ ಅನ್ನಪೂರ್ಣೇಶ್ವರಿ ದರ್ಶನ ಅಸಾಧ್ಯ ಎನ್ನುವಂತಹ ವಾತಾರಣ ನಿರ್ಮಾಣವಾಗಿದ್ದು, ಹೊರನಾಡಿನ ಎರಡೂ ಮಾರ್ಗವೂ ಬಂದ್ ಆಗಿದೆ. ಭಾರೀ ಮಳೆಯಿಂದ ಹೆಬ್ಬಾಳೆ ಸಂಪೂರ್ಣ ಬಂದ್ ಆಗಿದೆ. ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹಳುವಳ್ಳಿ ಮಾರ್ಗವೂ ರಸ್ತೆ ಕುಸಿತದಿಂದ ಮುಚ್ಚಲ್ಪಟ್ಟಿದೆ. ಭೂ ಕುಸಿತದಿಂದ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬಾಳೆಹೊನ್ನುರು, ಕಳಸದಿಂದ ಹೊರನಾಡಿಗೆ ಇರುವ ಪ್ರತ್ಯೇಕ ಮಾರ್ಗವೂ ಇಲ್ಲದಂತಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.
Advertisement
ಭದ್ರೆಯ ಅಬ್ಬರಕ್ಕೆ ಹೆಬ್ಬಾಳೆ, ಮಳೆಗಾಳಿ ಅಬ್ಬರಕ್ಕೆ ಹಳುವಳ್ಳಿ ರಸ್ತೆಯೂ ಬಂದ್ ಆಗಿವೆ. ಇದರಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲ ಸಂಪೂರ್ಣ ಬಂದ್ ಆದಂತಾಗಿವೆ.
Advertisement
ಹಾಸನ: ಬೇಲೂರಿನ ಐತಿಹಾಸಿಕ ವಿಷ್ಣು ಸಮುದ್ರ ಕೆರೆ ಭರ್ತಿಯಾಗಿದ್ದು, ಕೆರೆ ಉಕ್ಕಿ ಹರಿಯುತ್ತಿದೆ. ಕೆರೆ ಭರ್ತಿಯಾಗಿದ್ದರಿಂದ ನೀರು ಹೊರಗೆ ಹರಿಯುತ್ತಿದ್ದು, ಕೆರೆಯ ಬಳಿ ಇರುವ ಹತ್ತಾರು ಎಕರೆ ಜಮೀನಿಗೆ ನೀರು ನುಗ್ಗಿದೆ. ಇದರಿಂದ ಭತ್ತ ಹಾಗೂ ವಿವಿಧ ಬೆಳೆಗಳು ನೀರುಪಾಲಾಗಿವೆ. ಕೆರೆ ತುಂಬಿದ್ದರಿಂದ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವಂತಾಗಿದೆ. ಹಾಸನ ತಾಲೂಕಿನ ಅಗಸರಹಳ್ಳಿ ಸೇತುವೆ ಸಹ ಮುಳುಗಡೆಯಾಗಿದ್ದು, ಈ ಮಾರ್ಗದ ವಾಹನ ಸವಾರರು ಪರದಾಡುತ್ತಿದ್ದಾರೆ.
ಸಕಲೇಶಪುರದಲ್ಲಿ ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು, ಹೊಳೆಮಲ್ಲೇಶ್ವರ ದೇವಾಲಯ ಜಲಾವೃತಗೊಂಡಿದೆ. ಪಟ್ಟಣದ ಮೀನು ಮಾರುಕಟ್ಟೆ ಮತ್ತು ಆಝಾದ್ ರಸ್ತೆಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಬಿರುಗಾಳಿ ಸಹಿತ ಮಳೆಗೆ ಮಲೆನಾಡಿನ ಜನತೆ ತತ್ತರಿಸಿ ಹೋಗಿದ್ದಾರೆ. ಇನ್ನೂ ಸಹ ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗುತ್ತಿದ್ದು, ಪ್ರವಾಹದ ಭೀತಿ ಇನ್ನೂ ಹೆಚ್ಚಾಗಿದೆ.
ಉತ್ತರ ಕನ್ನಡ: ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದ್ದು, ಕಾರವಾರ ತಾಲೂಕಿನ ಕಿನ್ನರ ಗ್ರಾಮ ಜಲಾವೃತಗೊಂಡಿದೆ. ಗ್ರಾಮದ 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಕಾಳಿ ನದಿಯ ನೀರಿನ ಪ್ರವಾಹಕ್ಕೆ ಗ್ರಾಮಗಳು ಜಲಾವೃತಗೊಂಡಿವೆ.