ಚೆನ್ನೈ: ಚೆನ್ನೈನ (Chennai) ಪ್ರಭಾವಿ ಮಕ್ಕಳ ಹಕ್ಕುಗಳ ಪ್ರತಿಪಾದಕಿ ಲಲಿತಾ ನಟರಾಜನ್ (Lalitha Natarajan) ಅವರಿಗೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಅಮೆರಿಕದ ಡಿಪಾರ್ಟ್ ಮೆಂಟ್ ಆಫ್ ಲೇಬರ್‌ನ (United States department of labour) ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.
ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ನಡೆಸಿದ ಪ್ರಯತ್ನಗಳಿಗಾಗಿ ನೀಡುವ 2023ನೇ ಸಾಲಿನ ಇಕ್ಬಾಲ್ ಮಸಿ (Iqbal Masih) ಪುರಸ್ಕಾರಕ್ಕೆ ಚೆನ್ನೈನ ಲಲಿತಾ ನಟರಾಜನ್ ಭಾಜನರಾಗಿದ್ದಾರೆ. ಅಮೆರಿಕದ ಕಾನ್ಸಲ್ ಜನರಲ್ ಜುಡಿತ್ ರೇವಿನ್ ಈ ಪ್ರಶಸ್ತಿಯನ್ನು ಮೇ 30ರಂದು ಚೆನ್ನೈನ ಯುಎಸ್ ಕಾನ್ಸಲೇಟ್ ಜನರಲ್‍ನಲ್ಲಿ ನಡೆದ ಸಮಾರಂಭದಲ್ಲಿ ಲಲಿತಾ ನಟರಾಜನ್ ಅವರಿಗೆ ಪ್ರದಾನ ಮಾಡಿದ್ದರು. ಇದನ್ನೂ ಓದಿ: ಗಂಡ ಬೇರೆ ಮನೆಮಾಡದ್ದಕ್ಕೆ ತವರಿಗೆ ಕರೆಸಿ ಅತ್ತೆಯನ್ನೇ ಕೊಂದ ಸೊಸೆ!
Advertisement
ಲಲಿತಾ ನಟರಾಜನ್ ಅವರು ಬಾಲಕಾರ್ಮಿಕ ಪದ್ಧತಿಯಲ್ಲಿ ಹಕ್ಕು ಆಧಾರಿತ ವಿಧಾನಗಳನ್ನು ಅಳವಡಿಸಲು ವಕೀಲರಾಗಿ ಮತ್ತು ಹೋರಾಟಗಾರರಾಗಿ ತಮ್ಮ ವೃತ್ತಿಜೀವನದುದ್ದಕ್ಕೂ ದುಡಿದಿದ್ದಾರೆ. ದಕ್ಷಿಣ ಭಾರತದಲ್ಲಿ ಬಾಲಕಾರ್ಮಿಕರ ಶೋಷಣೆಗೆ ಅಂತ್ಯ ಹಾಡಲು, ಮಕ್ಕಳ ಕಳ್ಳಸಾಗಣೆಗೆ ಒಳಗಾದವರನ್ನು ಅದರಲ್ಲೂ ಮುಖ್ಯವಾಗಿ ಜೀತಕ್ಕಿದ್ದವರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದ್ದಾರೆ. ತಮಿಳುನಾಡು ಸರ್ಕಾರದ ಸಾಮಾಜಿಕ ರಕ್ಷಣೆ ಇಲಾಖೆಯ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ. ಬಾಲಕಾರ್ಮಿಕ ಕಾಯ್ದೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಪೊಕ್ಸೊ ಅಡಿಯಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರ ದೊರೆಯುವಂತೆ ಮಾಡಿದ್ದಾರೆ. ಅಲ್ಲದೇ ಕೌಟುಂಬಿಕ ದೌರ್ಜನ್ಯ ಮತ್ತು ಲೈಂಗಿಕ ಶೋಷಣೆಗೆ ಒಳಗಾದವರಿಗೆ ಕಾನೂನು ಮತ್ತು ಕೌನ್ಸೆಲ್ಲಿಂಗ್ ಬೆಂಬಲ ನೀಡಿದ್ದಾರೆ.
Advertisement
Advertisement
ಇಕ್ಬಾಲ್ ಮಸಿ ಪುರಸ್ಕಾರವು ಅಮೆರಿಕದ ಕಾಂಗ್ರೆಸ್ ನೀಡುವ ಪ್ರಶಸ್ತಿಯಾಗಿದ್ದು, ಇದು ಯಾವುದೇ ನಗದು ಹೊಂದಿರುವುದಿಲ್ಲ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಅಸಾಧಾರಣ ಕೊಡುಗೆ ನೀಡಿದವರನ್ನು ಗೌರವಿಸಲು ಈ ಪ್ರಶಸ್ತಿಯನ್ನು 2008ರಲ್ಲಿ ಸೆಕ್ರೆಟರಿ ಆಫ್ ಲೇಬರ್ ಪ್ರಾರಂಭಿಸಿತು. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಹೋರಾಟ ಮತ್ತು ಅದರ ಬಗೆಗಿನ ತಿಳಿವಳಿಕೆ ಹೆಚ್ಚಿಸುವ ಸಲುವಾಗಿ ಪ್ರತಿವರ್ಷ ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಆಚರಿಸಲಾಗುತ್ತದೆ. ಈ ಪ್ರಶಸ್ತಿಯೂ ಇದರ ಭಾಗವಾಗಿದೆ.
Advertisement
ಪಾಕಿಸ್ತಾನದ ಇಕ್ಬಾಲ್ ಮಸಿ, ನಾಲ್ಕರ ಎಳೆವಯಸ್ಸಿನಲ್ಲಿ ಕಾರ್ಪೆಟ್ ನೇಕಾರನಾಗಿ ಜೀತಕ್ಕೆ ಮಾರಾಟವಾಗಿದ್ದ, ತನ್ನ 10ನೇ ವಯಸ್ಸಿನಲ್ಲಿ ಅದರಿಂದ ಪಾರಾಗಿ ಮಕ್ಕಳ ಶೋಷಣೆಯ ಬಗ್ಗೆ ದನಿಯೆತ್ತಿದ. ಅದಕ್ಕಾಗಿ ಹಲವಾರು ಪ್ರಶಸ್ತಿ ಪುರಸ್ಕಾರಗಳೂ ಅವನನ್ನು ಹುಡುಕಿಕೊಂಡು ಬಂದವು. ಆದರೆ ಆತ ಹನ್ನೆರಡು ವರ್ಷದವನಿದ್ದಾಗ 1995 ರಲ್ಲಿ ದುರದೃಷ್ಟಕರ ರೀತಿಯಲ್ಲಿ ಕೊನೆಯುಸಿರೆಳೆದ.
ಮೇ 30ರಂದು ಮಂಗಳವಾರ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಯು.ಎಸ್. ಕಾನ್ಸುಲ್ ಜನರಲ್ ಜುಡಿತ್ ರೇವಿನ್, ಯು.ಎಸ್.ಸರ್ಕಾರ ಮತ್ತು ಅಮೇರಿಕದ ಜನರಿಗೆ ಜೀತ ಪದ್ಧತಿಯ ವಿರುದ್ಧದ ಹೋರಾಟ ಅತ್ಯಂತ ಪ್ರಮುಖವಾಗಿದೆ. ಇಂದು ನಮಗೆ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ ಮೆಂಟ್ ಆಫ್ ಲೇಬರ್‌ನ 2023 ಇಕ್ಬಾಲ್ ಮಸಿ ಪುರಸ್ಕಾರವನ್ನು ಈ ಕ್ಷೇತ್ರದದಲ್ಲಿ ದುಡಿದ ಲಲಿತಾ ನಟರಾಜನ್ ಅವರಿಗೆ ಕೊಡುತ್ತಿರುವುದು ನಮಗೆ ಹೆಮ್ಮೆಯ ವಿಷಯ. ಅವರ ದಿಟ್ಟ ಪ್ರಯತ್ನಗಳು ಭಾರತದ ಯುವಜನರಿಗೆ ಹಾಗೂ ದುರ್ಬಲ ವರ್ಗಗಳಿಗೆ ಸಾಮಾಜಿಕ ನ್ಯಾಯ ಪಡೆಯುವಲ್ಲಿ ನೆರವಾಗಿವೆ. ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಅವರು ತಮಿಳು ನಾಡಿನಲ್ಲಿ ಕಲ್ಲಿನ ಕ್ವಾರಿಗಳು, ಆಹಾರ ಸಂಸ್ಕರಣಾ ಕಾರ್ಖಾನೆಗಳು ಹಾಗೂ ಮಗ್ಗಗಳು ಸೇರಿದಂತೆ ಹಲವಾರು ಕೈಗಾರಿಕಾ ವಲಯಗಳಲ್ಲಿ ಜೀತಕ್ಕೊಳಗಾಗಿದ್ದ ಮಕ್ಕಳನ್ನು ರಕ್ಷಿಸಿದ್ದಾರೆ. ನೂರಾರು ಭಾರತೀಯ ಮಕ್ಕಳ ಜೀವನವನ್ನು ಬದಲಿಸುವಲ್ಲಿನ ಲಲಿತಾ ನಟರಾಜನ್ ಅವರ ಪರಿಶ್ರಮವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದಿದ್ದಾರೆ.
ಲಲಿತಾ ನಟರಾಜನ್ ಮಾತನಾಡಿ, ಯುಎಸ್ ಡಿಪಾರ್ಟ್‍ಮೆಂಟ್ ಆಫ್ ಲೇಬರ್‍ನಿಂದ ಪ್ರತಿಷ್ಠಿತ ಇಕ್ಬಾಲ್ ಮಸಿ ಪ್ರಶಸ್ತಿ ಸ್ವೀಕರಿಸುವುದು ನನಗೆ ಬಹಳ ಗೌರವವೆನಿಸಿದೆ. ಈ ಪ್ರಶಸ್ತಿಯು ನನ್ನನ್ನು ಮಕ್ಕಳ ಮತ್ತಷ್ಟು ಕಾರ್ಯಗಳಿಗೆ ತೊಡಗಿಕೊಳ್ಳಲು ಸ್ಫೂರ್ತಿ ನೀಡಿದೆ. ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆಯಾಗಿ ನಾನು ಹಲವಾರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು, ನ್ಯಾಯಾಂಗ ಮತ್ತು ಪೊಲೀಸರೊಂದಿಗೆ ಈ ಸಲುವಾಗಿ ಕಾರ್ಯ ನಿರ್ವಹಿಸಿದ್ದೇನೆ. ಮಕ್ಕಳ ಹಕ್ಕುಗಳ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಂಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಸಾರಿಗೆ ಬಸ್‍ನಿಂದ ಬಿದ್ದು ಬಾಲಕಿ ಸಾವು ಪ್ರಕರಣ – ನಿಗಮದಿಂದ ಹೊಸ ಆದೇಶ