ಉಡುಪಿ: ಶೀರೂರು ಸ್ವಾಮೀಜಿ ಶಿಷ್ಯ ಸ್ವೀಕಾರ ಮಾಡಬೇಕು ಎಂಬ ವಿಚಾರದಲ್ಲಿ ಉಡುಪಿ ಕೃಷ್ಣ ಮಠದಲ್ಲಿ ಚರ್ಚೆ ಆರಂಭವಾದ ಬೆನ್ನಲ್ಲೇ ಶೀರೂರು ಶ್ರೀಗಳು ಹೈಕೋರ್ಟ್ ನಿಂದ ಕೇವಿಯಟ್ ತಂದಿದ್ದಾರೆ.
ಶೀರೂರು ಶ್ರೀ ಸನ್ಯಾಸ ಧರ್ಮವನ್ನು ಪಾಲನೆ ಮಾಡದ ಕಾರಣ ಶೀರೂರು ಸ್ವಾಮೀಜಿ ಶಿಷ್ಯ ಸ್ವೀಕಾರ ಮಾಡಬೇಕು ಅನ್ನೋದು ಇತರ ಮಠಾಧೀಶರ ಅಭಿಪ್ರಾಯವಾಗಿತ್ತು.
ಅನಾರೋಗ್ಯ ಸಂದರ್ಭದಲ್ಲಿ ಶೀರೂರು ಸ್ವಾಮೀಜಿ, ತಮ್ಮ ಪಟ್ಟದ ದೇವರನ್ನು ಅದಮಾರು ಕಿರಿಯ ಸ್ವಾಮೀಜಿಯ ವಶಕ್ಕೆ ನೀಡಿದ್ದರು. ಆದರೆ ಪಟ್ಟದ ದೇವರು ಈಗ ಕೃಷ್ಣಮಠದಲ್ಲಿದೆ. ಪರ್ಯಾಯ ಪಲಿಮಾರು ಸ್ವಾಮೀಜಿ ಪೂಜೆ ನಡೆಸುತ್ತಿದ್ದಾರೆ. ಶೀರೂರು ಸ್ವಾಮೀಜಿ ಶಿಷ್ಯ ಸ್ವೀಕಾರ ಮಾಡದಿದ್ದರೆ ಪಟ್ಟದ ದೇವರನ್ನು ನೀಡಬಾರದು ಎಂದು ಇತರ ಮಠಾಧೀಶರು ತೀರ್ಮಾನಿಸಿದ್ದರು.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಷ್ಟಮಠಾಧೀಶರು ನ್ಯಾಯಾಲಯದ ಮೊರೆ ಹೋಗಬಹುದು ಎಂಬ ಹಿನ್ನೆಲೆಯಲ್ಲಿ ಶೀರೂರು ಸ್ವಾಮೀಜಿ ಈ ಕೇವಿಯಟ್ ತಂದಿದ್ದಾರೆ. ತನ್ನನ್ನು ವಿಶ್ವಾಸಕ್ಕೆ ಪಡೆಯದೆ ನ್ಯಾಯಾಲಯ ಈ ಕುರಿತು ಯಾವುದೇ ತೀರ್ಮಾನ ಕೈಗೊಳ್ಳಬಾರದು ಎಂಬ ಕಾರಣಕ್ಕೆ ಈ ಕಾನೂನು ಪ್ರಕ್ರಿಯೆ ನಡೆಸಲಾಗಿದೆ ಎಂದು ಸ್ವಾಮೀಜಿ ಹೇಳಿದ್ದಾರೆ. ಅಷ್ಟ ಮಠಾಧೀಶರು ಮತ್ತೊಮ್ಮೆ ಸಭೆ ಸೇರಿ ಪಟ್ಟದ ದೇವರ ಹಸ್ತಾಂತರ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುವುದು ಬಾಕಿಯಿದೆ.
ಕೇವಿಯಟ್ ಎಂದರೇನು?
ನಮ್ಮ ಅಹವಾಲನ್ನು ಕೇಳದೇ ಯಾವುದೇ ಆದೇಶ ನೀಡಬೇಡಿ ಎಂದು ಕೋರ್ಟ್‍ಗೆ ಮನವಿ ಮಾಡುವುದನ್ನು ಕೇವಿಯಟ್ ಎನ್ನಲಾಗುತ್ತದೆ. ಒಂದು ವಿಚಾರದಲ್ಲಿ ಬೇರೊಬ್ಬರು ಅರ್ಜಿ ಸಲ್ಲಿಸಿದಾಕ್ಷಣ, ಅವರ ವಾದ ಕೇಳಿ ಯಾವ ಆದೇಶವನ್ನೂ ನೀಡಬಾರದು. ಅಲ್ಲದೇ ನಮ್ಮ ವಾದಕ್ಕೂ ಮನ್ನಣೆ ನೀಡಬೇಕು. ಆ ಬಳಿಕವಷ್ಟೇ ಆದೇಶ ಹೊರಡಿಸಿ ಎಂದು ಕೇಳಿಕೊಳ್ಳುವುದೇ ಕೇವಿಯಟ್ ಆಗಿದೆ.