ನಾವು ಬೆಳೆದಂತೆ ಶತ್ರುಗಳ ಸಂಖ್ಯೆ ಹೆಚ್ಚಾಗುತ್ತೆ- ಜಾರಕಿಹೊಳಿಗೆ ಹೆಬ್ಬಾಳ್ಕರ್ ಟಾಂಗ್

Public TV
2 Min Read
RAMESH LAKSHMI

– ಸಿಎಂ ಅತೃಪ್ತರ ಶಾಸಕರ ಮೇಲೆ ಹದ್ದಿನ ಕಣ್ಣಿಟ್ಟಿರೋದು ನಿಜ
– ಪ್ರತಿಯೊಂದನ್ನು ಹೈಕಮಾಂಡ್ ಗಮನಿಸುತ್ತಿದೆ

ಬಾಗಲಕೋಟೆ: ನಾವು ದುರ್ಬಲರಾದರೆ ವೈರಿಗಳು ಇರುವುದಿಲ್ಲ. ಅದೇ ಬೆಳೆಯುತ್ತಾ ಹೋದಂತೆ ವೈರಿಗಳು ಹೆಚ್ಚಾಗುತ್ತಾರೆ ಎಂದು ಹೇಳುವ ಮೂಲಕ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ನಾನು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವೆ. ಇದು ಹೈಕಮಾಂಡ್, ಮಾಜಿ ಸಚಿವ ರಮೇಶ್ ಸರ್ ಅವರಿಗೂ ಗೊತ್ತಿದೆ. ಈಗ ಪ್ರತಿಯೊಂದಕ್ಕೂ ನನ್ನನ್ನೆ ಟಾರ್ಗೆಟ್, ಟ್ಯಾಗ್ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಈಗಾಗಲೇ ಹೈಕಮಾಂಡ್ ಇದನ್ನು ಗಮನಿಸುತ್ತಿದೆ ಎಂದರು.

ಜಿಲ್ಲೆಯ ಹುನಗುಂದದಲ್ಲಿ ನಡೆದ ಪಂಚಮಸಾಲಿ ಸಮಾವೇಶದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಅತೃಪ್ತರ ಶಾಸಕರ ಮೇಲೆ ಹದ್ದಿನ ಕಣ್ಣಿಟ್ಟಿರುವುದು ನಿಜ. ಸರ್ಕಾರವನ್ನು ಉಳಿಸಿಕೊಳ್ಳುವುದಕ್ಕೆ ಯಾರೂ ಸುಮ್ಮನೆ ಕೂರುವುದಿಲ್ಲ ಎಂದು ಹೇಳುವ ಮೂಲಕ ಸಿಎಂ ಗುಪ್ತಚರ ಮಾಹಿತಿ ಪಡೆಯುತ್ತಿರುವುದನ್ನು ಸಮರ್ಥಿಸಿಕೊಂಡರು.

CM HDK

ನಾವೇನು ಕಡ್ಲಿಪುರಿ ತಿನ್ನುತ್ತಾ ಕುಳಿತುಕೊಂಡಿಲ್ಲವೆಂದು ಸಿಎಂ ಹೇಳಿದ್ದಾರೆ. ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ. ರಾಜ್ಯದ ಜನರಿಗೆ ಭರವಸೆ ಮೂಡಿಸಿ ಸಮ್ಮಿಶ್ರ ಸರ್ಕಾರ ಬಂದಿದೆ. ನಾವು ನೀಡಿದ ಭರವಸೆಯನ್ನು ಈಡೇರಿಸುತ್ತೇವೆ ಎಂದರು.

ಸರ್ಕಾರ ಬೀಳಿಸುತ್ತೇನೆಂದು ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಅತೃಪ್ತ ನಾಯಕರ ನೇತೃತ್ವ ವಹಿಸಿದ ವಿಚಾರ ಬಗ್ಗೆ ಮಾತನಾಡಿ, ಅವರ ನಮ್ಮ ವೈಮನಸ್ಸು ಎಂದು ಹೇಳುವುದು ತಪ್ಪು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿಯೂ ಚರ್ಚೆ ಮಾಡಿದ್ದಾರೆ. ಅವರಿಗೆ ನೋಟಿಸ್ ಕೂಡಾ ನೀಡಿದ್ದಾರೆ. ಇದೆಲ್ಲಾ ಈಗ ಮುಗಿದ ಅಧ್ಯಾಯ. ಎಲ್ಲವೂ ಸುಖಾಂತ್ಯವಾಗುತ್ತದೆ ಎಂದರು ಭರವಸೆ ನೀಡಿದರು.

siddu poojary

ಆನಂದ್ ಸಿಂಗ್ ಹಲ್ಲೆ ಮಾಡಿದ ಕಂಪ್ಲಿ ಶಾಸಕ ಗಣೇಶ್ ಅವರನ್ನು ರಕ್ಷಣೆ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಯಾರು ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಮುಗಿಸಲೆಂದೇ ಬಂದಿದ್ದಾರೆ ಎನ್ನುವ ಜನಾರ್ದನ ಪೂಜಾರಿ ಹೇಳಿಕೆ ವಿಚಾರಕ್ಕೆ ಮಾತನಾಡಿ, ನನಗೆ ಈ ಇಬ್ಬರು ನಾಯಕರು ಬೇಕಾದವರು. ಇದನ್ನೆಲ್ಲಾ ಹೈಕಮಾಂಡ್ ಗಮನಿಸುತ್ತದೆ. ಅದರ ಬಗ್ಗೆ ಕಮೆಂಟ್ಸ್ ಮಾಡುವಷ್ಟು ದೊಡ್ಡವಳು ನಾನಲ್ಲ. ಸಿದ್ದರಾಮಯ್ಯ ಅವರು ಪ್ರಶ್ನಾತೀತ ನಾಯಕರು. ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತದೆ. ಯಾವ ಸಂದರ್ಭದಲ್ಲಿ ಯಾವ ಕಾರಣಕ್ಕೆ ಪೂಜಾರಿ ಅವರು ಮಾತನಾಡಿದ್ದಾರೆ ಎನ್ನುವುದು ಹೈಕಮಾಂಡ್ ವಿಚಾರಿಸುತ್ತದೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *