ಬೆಳಗಾವಿ: ನನ್ನ ಮೇಲೆ ಬಿಜೆಪಿ ಸರ್ಕಾರ ಎರಡು ಕೇಸ್ ಹಾಕಿದೆ. ಆದರೂ ನಾನು ಏನು ಮಾತನಾಡಲಿಲ್ಲ. ಬಹಳ ವಿನಮ್ರತೆಯಿಂದ ಸತ್ಯಮೇವ ಜಯತೇ ಅಂತಾ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದರು.
ಸಿಎಂ ಹಸ್ತದಿಂದ ಲೋಕಾರ್ಪಣೆಗೊಂಡ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಮತ್ತೊಮ್ಮೆ ಲೋಕಾರ್ಪಣೆ ಮಾಡಿದ ಬಳಿಕ ಕನ್ನಡ, ಮರಾಠಿ ಎರಡೂ ಭಾಷೆಯಲ್ಲಿ ಮಾತನಾಡಿದ ಅವರು, 2013ರ ವಿಧಾನಸಭೆ ಚುನಾವಣೆಯಲ್ಲಿ ಸೋತೆ, 2014ರ ಲೋಕಸಭೆ ಚುನಾವಣೆಯಲ್ಲಿ ಸೋತೆ. ಬಳಿಕ ನಾನು ಮನೆಯಲ್ಲಿ ಕೂರಲಿಲ್ಲ, ಜನರ ಬಳಿ ಹೋದೆ. ನಿಮ್ಮ ಎಲ್ಲರ ಮಗಳಾಗಿ ಕೆಲಸ ಮಾಡುತ್ತಿದ್ದೇನೆ. ಧೈರ್ಯಕ್ಕೆ ಏನು ಲಕ್ಷ್ಮಿ ಹೆಬ್ಬಾಳ್ಕರ್ ಕಡಿಮೆ ಇಲ್ಲ. ಇಂದು ಭಾವುಕಳಾಗಿದ್ದೇನೆ, ಕೊಡಬಾರದ ಕಷ್ಟ ಕೊಟ್ಟರು ಎಂದರು.
ನನ್ನ ಮೇಲೆ ಬಿಜೆಪಿ (BJP) ಸರ್ಕಾರ ಎರಡು ಕೇಸ್ ಹಾಕಿದೆ, ನಾನು ಏನು ಮಾತನಾಡಲಿಲ್ಲ. ಬಹಳ ವಿನಮ್ರತೆಯಿಂದ ಸತ್ಯಮೇವ ಜಯತೇ ಅಂತಾ ಕೆಲಸ ಮಾಡಿದೆ. ಬಹಳ ಜನ ಬರ್ತಾರೆ, ಪಹಣಿ ಮಾಡ್ತಾರಂತೆ. ಶಿಷ್ಟಾಚಾರದ ಪ್ರಕಾರ ಉದ್ಘಾಟನೆ ಮಾಡ್ತಾರಂತೆ. ಸಿಎಂ ಮೇಲೆ ನನಗೆ ಹೆಚ್ಚಿನ ಗೌರವ ಇದೆ, ಅವರದ್ದೇನು ತಪ್ಪಿಲ್ಲ. ಅವರ ಮೇಲೆ ರಾಜಕೀಯ ಒತ್ತಡ ಹಾಕಿ ಶಿವಾಜಿ ಪ್ರತಿಮೆ ಲೋಕಾರ್ಪಣೆ ಮಾಡಿಸಿದ್ದಾರೆ. ಶಿವಾಜಿ ಪ್ರತಿಮೆ ಇನ್ನೂ ಪೂರ್ಣಗೊಂಡಿರಲಿಲ್ಲ. ಸಂಜಯ್ ಪಾಟೀಲ್ (Sanjay Patil), ಗೋಕಾಕ್ ಶಾಸಕ ಇಲ್ಲಿ ಭೇಟಿ ನೀಡಿ ಹೋದ ಬಳಿಕ ಒಂದು ದಿನ ಬರಲಿಲ್ಲ. ಅವರು ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ನಿರತರಾಗಿದ್ದರು. ಅಷ್ಟೇ ಅಲ್ಲದೇ ಅಂದು ನಮ್ಮ ಮಹಾರಾಜರ ಪ್ರತಿಮೆ ಪಕ್ಕದಲ್ಲಿಯೇ ಪೊರಕೆ, ಪೇಂಟ್ ಬಕೆಟ್ ಇತ್ತು. ಕೇವಲ 12 ನಿಮಿಷದಲ್ಲಿ ಅಪೂರ್ಣ ಮೂರ್ತಿ ಉದ್ಘಾಟನೆ ಮಾಡಿ ಅಪಮಾನ ಮಾಡಿದ್ದರು. ಶಿವಭಕ್ತರ ಅಪಮಾನ ಮಾಡಿದ್ರು, ರಾಜಕಾರಣ ಮಾಡಿದ್ದಾರೆ ಎಂದು ಕಿಡಿಕಾರಿದರು.
ನಾನು ಸಿದ್ದೇಶ್ವರ ಮೇಲೆ ಆಣೆ ಮಾಡುತ್ತೇನೆ. ನಾನು ಈ ವಿಚಾರದಲ್ಲಿ ರಾಜಕಾರಣ ಮಾಡಲಿಲ್ಲ. ನಾನು ಶಾಸಕಿಯಾದ ಮೇಲೆ ಡಿಕೆಶಿ ಕನ್ನಡ ಮತ್ತು ಸಂಸ್ಕೃತಿ ಸಚಿವರಿದ್ದಾಗ 50 ಲಕ್ಷ ಅನುದಾನ ಮಂಜೂರು ಮಾಡಿಸಿದೆ. ನಮ್ಮ ಸರ್ಕಾರ ಬಿದ್ದ ಮೇಲೆ ವಿನಂತಿ ಮಾಡಿದೆ. ಆದರೆ ಕೋವಿಡ್ ಬಂತು. ಆದರೆ ನನಗೆ ದೇವರ ಮೇಲೆ ರಾಜಕಾರಣ ಮಾಡೋದು ಬೇಕಿಲ್ಲ. ನಿಜ ಅರ್ಥದಲ್ಲಿ ಇಂದು ಶಿವಾಜಿ ಮಹಾರಾಜರ ಉದ್ಘಾಟನೆ ಆಗಿದೆ. ಇಂತಹ ಪುಣ್ಯ ಕೆಲಸ ಮಾಡಲು ನನಗೆ ಅವಕಾಶ ಕೊಟ್ರಿ ಇದು ನನ್ನ ಪುಣ್ಯ. ಈ ಕೆಲಸ ನಾನಲ್ಲ ನಾವು ಎಲ್ಲರೂ ಸೇರಿ ಮಾಡಿದ್ದೇವೆ ಎಂಬ ಅಭಿಮಾನವಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಲ್ಲಿ ಸಿಲಿಂಡರ್ ಸ್ಫೋಟ – 13 ವರ್ಷದ ಬಾಲಕ ಸಾವು
60 ದಿನಗಳಲ್ಲಿ ಮತ್ತೆ ಚುನಾವಣೆ ಇದೆ, ಮತ್ತೆ ನಿಮ್ಮ ಮುಂದೆ ಬಂದು ಧರ್ಮ ವಿಚಾರ ಪ್ರಸ್ತಾಪ ಮಾಡುತ್ತಾರೆ. ನಿಮ್ಮ ವಿಶ್ವಾಸ ನನ್ನ ಮೇಲೆ ಹೀಗೆ ಇರಲಿ. ಮುಂದೆ ಒಳ್ಳೆಯ ದಿನಗಳು ಬಂದೇ ಬರುತ್ತವೆ. ಬಹಳ ಹಿಂದುಳಿದ ಬೆಳಗಾವಿ ಗ್ರಾಮೀಣ ಕ್ಷೇತ್ರ ಕರ್ನಾಟಕದಲ್ಲಿ ನಂಬರ್ ಒನ್ ಕ್ಷೇತ್ರ ಮಾಡುವ ಗುರಿ ಹೊಂದಿದ್ದೇನೆ. ನೀವು ಹೇಳುವ ಕೆಲಸ ತಲೆ ಮೇಲೆ ಇಟ್ಟುಕೊಂಡು ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ದೇಶದಲ್ಲಿ ಹೆಚ್3ಎನ್2 ವೈರಸ್ ಹಾವಳಿ – ರಾಜ್ಯಗಳಿಗೆ ಕೇಂದ್ರದಿಂದ ಮುಂಜಾಗ್ರತೆ ವಹಿಸುವಂತೆ ಸೂಚನೆ