ಬೆಂಗಳೂರು: ಕೋಣ ಗಬ್ಬಾಗಿದೆ ಅಂದರೆ ಹುಃ ಅನ್ನೋ ಪರಿಸ್ಥಿತಿ ನಮ್ಮದಾಗಿದೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ.
ವಿಶ್ವಾಸ ಮತಯಾಚನೆ ಚರ್ಚೆ ವೇಳೆ ಮಾತನಾಡಿದ ಅವರು, ಇಂದಿನ ರಾಜಕೀಯ ಪರಿಸ್ಥಿಯ ಬಗ್ಗೆ ಕೇಳಿಲ್ಲ ನೋಡಿಲ್ಲ. ಇಂತಹ ಪ್ರಹಸನಕ್ಕೆ ನಾವು ಸಾಕ್ಷಿಯಾಗಿದ್ದೇವೆ ಎನ್ನುವುದು ದುರಂತ. ಪಂಚಾಯಿತಿ ಸದಸ್ಯರಿಗೆ ಇರುವ ಗೌರವ ಶಾಸಕರಿಗೆ ಇಲ್ಲದಂತಾಗಿದೆ. ಬೇರೆಯವರಿಂದ ಅಸಹ್ಯದ ಮಾತು ಕೇಳಿ, ಶ್ರಮಪಟ್ಟು, ಕೇಳಬಾರದ ಮಾತುಕೇಳಿ ಶಾಸಕಿಯಾಗಿದ್ದೇನೆ. ಬೆಳಗಾವಿಯಂತ ಗಡಿ ಪ್ರದೇಶದಲ್ಲಿ ಗೆಲವು ಸಾಧಿಸಿದ್ದಕ್ಕೆ ಖುಷಿಪಟ್ಟಿದ್ದೆ. ಆದರೆ ಇಂದು ಈಗಿನ ಪರಿಸ್ಥಿತಿಯನ್ನು ಎಲ್ಲರೂ ಲೇವಡಿ ಮಾಡುತ್ತಿದ್ದಾರೆ ಎಂದು ಹೇಳಿದರು.
Advertisement
Advertisement
ಕೆಲ ಶಾಸಕರಿಗೆ ವೈಯಕ್ತಿಕ ಕಾರಣವಿರಬಹುದು, ಮನಸ್ತಾಪ ಇರಬಹುದು ಇದನ್ನೆಲ್ಲ ಹೇಳುವುದಕ್ಕೆ ನಾನು ವಯಸ್ಸಿನಲ್ಲೂ, ಅನುಭವದಲ್ಲೂ ಸಣ್ಣವಳು. ಆದರೆ ಇವತ್ತು ಪಕ್ಷ ಅಂದರೆ ತಂದೆ ತಾಯಿ ಇದ್ದಂತೆ. ಅಂತಹ ಪಕ್ಷಕ್ಕೆ ಚಾಕು ಹಾಕಿ ಹೋದವರು ನಿಮ್ಮ ಜೊತೆ ಹೇಗಿರುತ್ತಾರೆ. ಬಿ.ಎಸ್.ಯಡಿಯೂರಪ್ಪನವರೇ ಅವತ್ತು ನಿಮ್ಮನ್ನು ಸಿಎಂ ಸೀಟಿನಿಂದ ಇಳಿಸಿದ್ದು ಕಾಂಗ್ರೆಸ್‍ನವರಲ್ಲ ನಿಮ್ಮವರೇ ಎಂದು ಕುಟುಕಿದರು.
Advertisement
ಪಶ್ಚಿಮ ಬಂಗಾಳ ತೃಣಮೂಲ ಕಾಂಗ್ರೆಸ್‍ನ (ಟಿಎಂಸಿ) ಶಾಸಕರು ಬಿಜೆಪಿಗೆ ಸೇರುತ್ತಾರೆ ಅಂತ ಪಕ್ಷದ ಬಿಜೆಪಿಯವರು ಬಹಿರಂಗವಾಗಿ ಹೇಳಿಕೆ ನೀಡುತ್ತಾರೆ. ಭಾರತ ಅಷ್ಟೇ ಅಲ್ಲ ಅಮೆರಿಕಾದಲ್ಲೂ ಕಮಲವನ್ನು ಅರಳಿಸುತ್ತೇವೆ ಎನ್ನುವ ಭಂಡತನ ಬಿಜೆಪಿಗೆ ಇದೆ. ಪಕ್ಷಕ್ಕಾಗಿ ದುಡಿದವರನ್ನು ಬಿಟ್ಟು ಈಗ ಪಕ್ಷಕ್ಕೆ ಬರುವವವರಿಗೆ ಮಂತ್ರಿ ಸ್ಥಾನ ನೀಡಲು ಮುಂದಾಗಿದ್ದೀರಿ ಇದು ಎಷ್ಟು ಸರಿ ಎಂದು ಪ್ರಶ್ನಿಸಿ ಕಿಡಿಕಾರಿದರು.
Advertisement
ಪಕ್ಷದಿಂದ ಹೋದವರಿಗೆ ಒಳ್ಳೆ ಬುದ್ಧಿ ಕೊಡಲಿ. ವಾಪಸ್ ಬನ್ನಿ, ಸರ್ಕಾರವನ್ನು ಸುಭದ್ರವಾಗಿ ನಡೆಸಿಕೊಡುವಂತೆ ನಾನು ಮನವಿ ಮಾಡುತ್ತೇನೆ. ವೈಯಕ್ತಿಕ ಸ್ವಾರ್ಥ ಬಿಟ್ಟುಬಿಡಿ. ಸಣ್ಣ ಕೆಲಸ ಇರಲಿ ದೊಡ್ಡ ಕೆಲಸ ಇರಲಿ ಕೇಳಿದಾಗ ಎಂದೂ ಸಿಎಂ ನಿರ್ಲಕ್ಷ್ಯ ವಹಿಸಿದವರಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಅಷ್ಟೇ ಸ್ಪಂದನೆ ಕೊಡುತ್ತಿದ್ದಾರೆ ಎಂದು ಹೇಳಿದರು.