ಬೆಳಗಾವಿ: ಜಿಲ್ಲೆಯ ಗೋಕಾಕ್ ಉಪಚುನಾವಣೆ ಅಖಾಡ ಮತ್ತಷ್ಟು ರಂಗೇರಿದ್ದು, ಜಾರಕಿಹೊಳಿ ಸಹೋದರ ನಡುವಿನ ವಾಕ್ಸಮರ ಜೋರಾಗಿದೆ. ಅಳಿಯ-ಮಾವನ ವಿರುದ್ಧ ಹೋರಾಟ ನಿರಂತರ, ಗೋಕಾಕ್ ಭ್ರಷ್ಟಾಚಾರದ ವಿಡಿಯೋ ಶೀಘ್ರವೇ ಬಿಡುಗಡೆ ಮಾಡುತ್ತೇನೆ. ಕಳೆದು ಹೋಗಿರುವ ವಸ್ತು ಬಗ್ಗೆ ಹೇಳುತ್ತೇನೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ರಮೇಶ್ ಜಾರಕಿಹೊಳಿ ವಿರುದ್ಧ ಗುಡುಗಿದ್ದಾರೆ.
ಸಹೋದರ ಸತೀಶ್ ಅವರ ಮಾತಿಗೆ ತಿರುಗೇಟು ನೀಡಿರುವ ರಮೇಶ್, ಸತೀಶನ ಆರೋಪಗಳಿಗೆ ಬಹಿರಂಗವಾಗಿ ಉತ್ತರ ನೀಡುತ್ತೇನೆ. ಸತೀಶ್ ಆಪ್ತರನ್ನು ಕರೆದು ಕೇಳಿದ್ದೇನೆ. ಅವರ ಪ್ರಕಾರ ಸತೀಶ್ ಹೇಳುತ್ತಿರುವ ವಸ್ತು ಮಂಗಳೂರು ಅಥವಾ ಮೈಸೂರಿನದ್ದಾಗಿರಬಹುದು. ಯಾರೇ ಆಗಲಿ ವೈಯಕ್ತಿಕವಾಗಿ ಟೀಕೆ ಟಿಪ್ಪಣಿ ಮಾಡಬಾರದು. ಅವನಿಗೆ ಸ್ವಲ್ಪ ಮೈಂಡ್ ಔಟ್ ಆಗಿದೆ. ಧಾರವಾಡ ಹುಚ್ಚಾಸ್ಪತ್ರೆಗೆ ಕಳಿಸಬೇಕು ಎಂದರು.
ಇತ್ತ ಸಹೋದರ ಲಖನ್ ಜಾರಕಿಹೊಳಿ ಅವರು ಕೂಡ ರಮೇಶ್ ವಿರುದ್ಧ ಕಿಡಿಕಾರಿದ್ದು, ಅವರ ಗೇಮ್ ಗೊತ್ತಿದೆ. ಅದು ಗಿಮಿಕ್, ನಾಟಕ ಆಡುತ್ತಿದ್ದಾರೆ. ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಮೊನ್ನೆ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಅಳಿಯ ಸೋತಿದ್ದು, ಈ ಬಾರಿ ಜನ ಎದ್ದು ಕುಳಿತ್ತಿದ್ದಾರೆ. ನ.5ರ ವರೆಗೂ ಬಹಳ ನಾಟಕ ಮಾಡುತ್ತಾರೆ. ನನ್ನ ಪ್ರೀತಿಯ ಸಹೋದರನ ಜೊತೆ ಮಾತನಾಡುತ್ತೇನೆ ಎಂದು ಹೇಳಿ ಗಿಮಿಕ್ ಮಾಡುತ್ತಾರೆ. ನಾನೂ 25 ವರ್ಷ ರಮೇಶ್ ಪರವಾಗಿ ಚುನಾವಣೆ ಮಾಡಿದ್ದು, ಈ ರೀತಿಯ ಹೇಳಿಕೆಗಳು ಕೇವಲ ನಾಟಕವಷ್ಟೇ ಎಂದರು.