ಕೊಪ್ಪಳ: ರಾಜ್ಯ ಹೆದ್ದಾರಿಯಲ್ಲಿದ್ದ ಬಾರ್‍ನ್ನು ಗ್ರಾಮದಲ್ಲಿ ಸ್ಥಳಾಂತರ ಮಾಡಿದಕ್ಕೆ ವಿರೋಧಿಸಿ ಸ್ಥಳೀಯ ಮಹಿಳೆಯರು ಪ್ರತಿಭಟನೆ ನಡೆಸಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಳಿಯ ಹೆದ್ದಾರಿಯಲ್ಲಿದ್ದ ಬಾರ್‍ನ್ನು ಮಾಲೀಕ ಅಕ್ತರ್ ಅನ್ಸಾರಿ ಬಸಾಪಟ್ಟಣ ಪಟ್ಟಣದ 5ನೇ ವಾರ್ಡ್‍ಗೆ ಸ್ಥಳಾಂತರ ಮಾಡಿದ್ದಾರೆ. ಬಾರ್ ಗ್ರಾಮಕ್ಕೆ ಬಂದಿದಕ್ಕೆ ವಾರ್ಡ್‍ನ ಮಹಿಳೆಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಜನನಿಬಿಡ ಪ್ರದೇಶವಾದ ಇಲ್ಲಿ ಕೂಲಿ ಕಾರ್ಮಿಕರು ಹೊಟ್ಟೆ ಪಾಡಿಗಾಗಿ ದೂರದ ಊರುಗಳಿಂದ ಬಂದು ನೆಲೆಸಿರುವವರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಬಾರ್ ತೆರಯುವದರಿಂದ ಮನೆಯ ಪುರುಷರು ಹಾಳಾಗ್ತಾರೆ ಎಂದು ಮಹಿಳೆಯರು ಆರೋಪಿಸಿ ಪ್ರತಿಭಟನೆ ನಡೆಸಿದರು.
ಬಾರ್ ಮಾಲೀಕರಾಗಿರುವ ಅಖ್ತರ್ ಅನ್ಸಾರಿ, ಶಾಸಕ ಇಕ್ಬಾಲ್ ಅನ್ಸಾರಿ ಅವರ ಸಹೋದರರಾಗಿದ್ದು ಅಣ್ಣನ ಅಧಿಕಾರ ಬಲದಿಂದ ನಮ್ಮನ್ನು ಬೆದರಿಸುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಸ್ತೆ ಅಪಘಾತಗಳು ಹೆಚ್ಚು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಹೆದ್ದಾರಿಯಿಂದ 500 ಮೀಟರ್ ವ್ಯಾಪ್ತಿಯಲ್ಲಿರುವ ಮದ್ಯದ ಅಂಗಡಿಗಳನ್ನು ಬಂದ್ ಮಾಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಹೆದ್ದಾರಿ ಬಳಿಯ ಬಾರ್‍ಗಳು ಬಂದ್ ಆಗಿ ಬೇರೆ ಪ್ರದೇಶಗಳಿಗೆ ಶಿಫ್ಟ್ ಆಗುತ್ತಿದೆ.
ಸುಪ್ರೀಂ ಹೇಳಿದ್ದು ಏನು?
ಮದ್ಯಪಾನದಿಂದಾಗಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 20 ಸಾವಿರ ಜನಸಂಖ್ಯೆ ಇರುವ ಪಟ್ಟಣಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ 200 ಮೀಟರ್ ಹಾಗೂ 20 ಸಾವಿರ ಮೇಲ್ಪಟ್ಟು ಜನಸಂಖ್ಯೆ ಇರುವ ನಗರಗಳಲ್ಲಿ 500 ಮೀಟರ್ ವರೆಗಿರುವ ಮದ್ಯ ದಂಗಡಿಗಳನ್ನು ಸ್ಥಳಾಂತರಿಸಬೇಕು. ಇಲ್ಲವೇ ಬಂದ್ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಅಷ್ಟೇ ಅಲ್ಲದೇ ಈ ಮದ್ಯದ ಅಂಗಡಿಗಳ ಪರಾವನಗಿಗಳನ್ನು ಮಾರ್ಚ್ 31ರ ಬಳಿಕ ನವೀಕರಿಸಬಾರದು ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರ ನೇತೃತ್ವದ ಪೀಠ ಹೇಳಿತ್ತು. ಈ ಆದೇಶದ ಬಳಿಕ ರಾಜ್ಯ ಸರ್ಕಾರಗಳು ನಗರ ಒಳಗಡೆ ಹೆದ್ದಾರಿಗಳನ್ನು ಡಿನೋಟಿಫೈ ಮಾಡಿ ಆದೇಶ ಹೊರಡಿಸಿತ್ತು.