ಮಡಿಕೇರಿ: ಇತ್ತೀಚೆಗೆ ಉತ್ತರ ಕರ್ನಾಟಕದಾದ್ಯಂತ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟದಿಂದ ತತ್ತರಿಸಿ ಹೋಗಿದ್ದವು. ಈಗ ಮತ್ತೊಮ್ಮೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನೆರೆಯ ಆಗಮನದಿಂದ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅಲ್ಲಿನ ಸಂತ್ರಸ್ತರ ಬದುಕು ಮೂರಾಬಟ್ಟೆಯಾಗುವ ಹಂತ ತಲುಪಿದೆ.
ಕೇವಲ ಉತ್ತರ ಕರ್ನಾಟಕ ಭಾಗಕ್ಕೆ ಮಾತ್ರ ಸೀಮಿತವಾಗಿದ್ದ ವರುಣನ ಆರ್ಭಟ ಇದೀಗ ಮತ್ತೆ ಕೊಡಗು ಜಿಲ್ಲೆಯಲ್ಲಿಯೂ ಶುರುವಾಗಿದ್ದು, ಕ್ಯಾರ್ ಚಂಡಮಾರುತದ ಪರಿಣಾಮ ಜಿಲ್ಲೆಗೂ ತಟ್ಟಿದೆ. ಮಳೆಯ ಆರ್ಭಟಕ್ಕೆ ಕೊಡಗು ಜಿಲ್ಲೆಯಾದ್ಯಂತ ಪ್ರವಾಸೋದ್ಯಮ ತತ್ತರಿಸಿ ಹೋಗಿದೆ, ಪ್ರವಾಸಿಗರ ಆಗಮನವಿಲ್ಲದೆ ವ್ಯಾಪಾರ ವಹಿವಾಟುಗಳು ಇಳಿಮುಖವಾಗಿದೆ.
Advertisement
Advertisement
ಕಾವೇರಿ ನಿಸರ್ಗಧಾಮ, ದುಬಾರೆ ಆನೆ ಕ್ಯಾಂಪ್ ಶಿಬಿರ, ದುಬಾರೆಯ ರಿವರ್ ರಾಫ್ಟಿಂಗ್, ಹಾರಂಗಿ ಅಣೆಕಟ್ಟು, ಅಬ್ಬಿ ಜಲಪಾತ, ಗೋಲ್ಡನ್ ಟೆಂಪಲ್, ಚಿಕ್ಲಿಹೊಳೆ ಜಲಾಶಯ ಮುಂತಾದ ಪ್ರೇಕ್ಷಣೀಯ ಸ್ಥಳಗಳಲ್ಲಿ ದಿನದೂಡುತ್ತಿದ್ದ ಪ್ರವಾಸಿಗರ ಸಂಖ್ಯೆ ಮಳೆಯ ಆಗಮನದಿಂದಾಗಿ ಇಳಿಮುಖವಾಗುತ್ತಿರುವುದು ಕೂಡ ಪ್ರವಾಸೋದ್ಯಮಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರವಾಸಿಗರ ಆಗಮನ ಇಳಿಮುಖವಾದ ಪರಿಣಾಮ ಪ್ರೇಕ್ಷಣೀಯ ಸ್ಥಳಗಳ ವ್ಯಾಪಾರಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
Advertisement
Advertisement
ಕಳೆದ ಬಾರಿ ವರುಣನ ಆರ್ಭಟದಿಂದಾಗಿ ಕಾವೇರಿ ನದಿಯು ತುಂಬಿ ಹರಿದ ಪರಿಣಾಮ ನದಿ ತಟದಲ್ಲಿರುವ ಪ್ರೇಕ್ಷಣೀಯ ಸ್ಥಳಗಳು ಜಲಾವೃತವಾಗಿ ವ್ಯಾಪಾರೋದ್ಯಮಿಗಳು ಕೈಸುಟ್ಟುಕೊಂಡ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಜಿಲ್ಲೆಯಾದ್ಯಂತ ಮತ್ತೆ ಮಳೆರಾಯ ಘರ್ಜಿಸುತ್ತಿರುವ ಪರಿಣಾಮವಾಗಿ ಮತ್ತೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು. ಆದರೆ ಸ್ಪಲ್ಪ ದಿನಗಳ ಹಿಂದೆಯಷ್ಟೇ ಚೇತರಿಸಿಕೊಳ್ಳುತ್ತಿದ್ದ ಪ್ರವಾಸೋದ್ಯಮವು ಮತ್ತೆ ತಣ್ಣಗಾಗುವ ಹಂತ ತಲುಪುತ್ತಿದೆ.