ಬೆಂಗಳೂರು: ಪ್ರೇಕ್ಷಕರೆಲ್ಲ ಕಾತರದಿಂದ ಕಾಯುತ್ತಿದ್ದ ಕ್ಷಣವೊಂದು ಕಣ್ಣಮುಂದೆಯೇ ಅವತರಿಸಿದೆ. ಮುನಿರತ್ನ ಕುರುಕ್ಷೇತ್ರ ಚಿತ್ರದ ಪ್ರತಿ ವಿದ್ಯಮಾನದತ್ತಲೂ ದರ್ಶನ್ ಅಭಿಮಾನಿಗಳು ಸೇರಿದಂತೆ ಪ್ರೇಕ್ಷಕರೆಲ್ಲ ಕಣ್ಣು ನೆಟ್ಟಿದ್ದಾರೆ. ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನೆರೆದಿದ್ದ ಅಪಾರ ಜನಸ್ತೋಮದ ನಡುವೆ ಕುರುಕ್ಷೇತ್ರದ ಆಡಿಯೋ ಬಿಡುಗಡೆಯಾಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್, ಹರಿಪ್ರಿಯಾ, ಸೋನು ಸೂದ್, ಡ್ಯಾನಿಷ್ ಅಖ್ತರ್ ಸೈಫ್ ಸೇರಿದಂತೆ ಕುರುಕ್ಷೇತ್ರ ತಾರಾಗಣದ ಕಲಾವಿದರು ಮತ್ತು ಗಣ್ಯರ ಸಮ್ಮುಖದಲ್ಲಿ ಆಡಿಯೋ ಅನಾವರಣಗೊಂಡಿದೆ. ಈ ಚಿತ್ರದಲ್ಲಿ ರವಿಚಂದ್ರನ್, ಅಂಬರೀಶ್, ಶಶಿಕುಮಾರ್, ಅರ್ಜುನ್ ಸರ್ಜಾ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಆದರೆ ಅದೆಲ್ಲದರಾಚೆಗೆ ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಐವತ್ತನೇ ಚಿತ್ರವೆಂಬ ಸಂಭ್ರಮ ಅಭಿಮಾನಿ ಬಳಗವನ್ನೆಲ್ಲ ಈ ಕಾರ್ಯಕ್ರಮದಲ್ಲಿ ಜಮೆಯಾಗಿಸಿತ್ತು.
Advertisement
Advertisement
ಅಷ್ಟಕ್ಕೂ ಕೋರಮಂಗಲದ ಒಳಾಂಗಣ ಸ್ಟೇಡಿಯಂ ಆವರಣದಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ಅಭಿಮಾನಿ ಬಳಗ ಸೇರಿಕೊಳ್ಳಲಾರಂಭಿಸಿತ್ತು. ನಂತರ ಸಂಜೆಯ ಹೊತ್ತಿಗೆ ಹಾಗೆ ಜಮೆಯಾದ ಜನಸ್ತೋಮದ ನಡುವೆಯೇ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಮೊನ್ನೆ ತಾನೇ ಬಿಡುಗಡೆಯಾಗಿದ್ದ ಸಾಹೋರೆ ಸಾಹು ಆಜಾನುಬಾಹು ಎಂಬ ಹಾಡಿನ ಮೂಲಕವೇ ವೇದಿಕೆಗೆ ಕರೆತರಲಾಯ್ತು. ನಂತರ ಕಲಾವಿದರು ಮತ್ತು ಗಣ್ಯರ ಸಮ್ಮುಖದಲ್ಲಿ ಕುರುಕ್ಷೇತ್ರ ಚಿತ್ರದ ಆಡಿಯೋ ಅದ್ಧೂರಿಯಾಗಿಯೇ ಬಿಡುಗಡೆಯಾಗಿದೆ.
Advertisement
Advertisement
ಇಲ್ಲಿನ ಹಾಡುಗಳಿಗೆ ಕವಿರತ್ನ ಡಾ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಒದಗಿಸಿದ್ದಾರೆ. ವಿ.ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ಕುರುಕ್ಷೇತ್ರದಂಥಾ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡುವುದು ಸವಾಲಿನ ಕೆಲಸ. ಸುದೀರ್ಘ ಸಮಯ ತೆಗೆದುಕೊಂಡೇ ವಿ ಹರಿಕೃಷ್ಣ ಕುರುಕ್ಷೇತ್ರದ ಹಾಡುಗಳನ್ನು ರೂಪಿಸಿದ್ದಾರೆ. ಅದುವೇ ಈ ಚಿತ್ರದ ಮತ್ತೊಂದು ಆಕರ್ಷಣೆಯಂತೆಯೂ ಮೂಡಿ ಬಂದಿದೆ. ಇದೇ ವೇದಿಕೆಯಲ್ಲಿ ಬಿಡುಗಡೆಯಾಗಿದ್ದ ಟ್ರೈಲರ್ ನಾಗಾಲೋಟದಿಂದ ಹೆಚ್ಚು ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿದ್ದರೆ, ಆಡಿಯೋಗೂ ಕೂಡಾ ಉತ್ತಮ ಪ್ರತಿಕ್ರಿಯೆಗಳೇ ಬರುತ್ತಿವೆ.
ಕುರುಕ್ಷೇತ್ರ ದೊಡ್ಡ ಕ್ಯಾನ್ವಾಸಿನ ಚಿತ್ರ. ಮುನಿರತ್ನ ಅವರ ವೃಷಬಾದ್ರಿ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣ ಮಾಡಿರುವ ಈ ಚಿತ್ರವನ್ನು ನಾಗಣ್ಣ, ವಿ ನಾಗೇಂದ್ರಪ್ರಸಾದ್, ಎಸ್ ವಿ ಪ್ರಸಾದ್ ಹಾಗೂ ದೇವರಾಜ್ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಕುರುಕ್ಷೇತ್ರದ ಕ್ರೇಜ್ ದೇಶಾದ್ಯಂತ ಹಬ್ಬಿಕೊಂಡಿದೆ. ಈಗ ಬಿಡುಗಡೆಯಾಗಿರೋ ಆಡಿಯೋ ಮೂಲಕ ಅದು ಮತ್ತಷ್ಟು ಪ್ರಜ್ವಲಿಸಿದೆ.