ಬೆಂಗಳೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಾಧ್ಯವಿಲ್ಲವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ನಗರದ ಅರಮನೆ ಮೈದಾನದ ಕಿಂಗ್ ಪೋರ್ಟ್ ನಲ್ಲಿ ನಡೆದ ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂಬ ಬೇಡಿಕೆ ಈಡೇರೋದು ಅಷ್ಟು ಸುಲಭ ಅಲ್ಲ. ನಾನು ಸಂವಿಧಾನ ಓದಿದ್ದೇನೆ. ಹೀಗಾಗಿ ಅರ್ಥಮಾಡಿಕೊಂಡು ಹೇಳುತ್ತಿದ್ದೇನೆ. ನೀವು ಹೇಳಿದ ತಕ್ಷಣಕ್ಕೇ ಸಮುದಾಯವನ್ನು ಎಸ್ಟಿ ಪಂಗಡಕ್ಕೆ ಸೇರಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
Advertisement
ಸಂವಿಧಾನವನ್ನು ಓದಿದ್ದೇವೆ ಆದ್ದರಿಂದ ಜನರಲ್ಲಿ ಸುಮ್ಮ ಸುಮ್ಮನೆ ಭ್ರಮೆಯನ್ನು ಮೂಡಿಸಬೇಡಿ. ಪ್ರಾಕ್ಟಿಕಲ್ ಆಗಿ ಸೇರಿಸಲು ಸಾಧ್ಯ ಇಲ್ಲ. ಸಂವಿಧಾನದಲ್ಲಿ ಇದಕ್ಕೆ ಅವಕಾಶ ಇಲ್ಲ. ಹೀಗಾಗಿ ಜನರಿಗೆ ತಪ್ಪು ಮಾಹಿತಿ ನೀಡೋದು ಬೇಡ. ಕೇವಲ ಜನರ ಚಪ್ಪಾಳೆಗಾಗಿ ಭಾಷಣ ಮಾಡೋದು ಬೇಡ. ಕೆಲವರು ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ. ಇದರಿಂದಾಗಿ ನಮ್ಮಲ್ಲಿರುವ ಒಗ್ಗಟ್ಟು ಒಡೆಯುವ ಕೆಲಸವನ್ನು ಮಾಡಬೇಡಿ ಎಂದು ಕೇಳಿಕೊಂಡರು.
Advertisement
Advertisement
ಚುನಾವಣೆಗೂ ಮೊದಲು 70% ಒಗ್ಗಟ್ಟಿತ್ತು ಆದರೆ ಚುನಾವಣೆಯ ಫಲಿತಾಂಶದಲ್ಲಿ ಒಗ್ಗಟ್ಟಿರುವುದು ಕೇವಲ 30%ರಷ್ಟು. ನಾನು ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದರೆ, ಕುರುಬ ಸಮುದಾಯ ಮೀಸಲಾತಿಯನ್ನು ಏರಿಸುವ ಯೋಚನೆಯನ್ನು ಮಾಡಿದ್ದೆ, ಇದರಿಂದ ಕುರುಬ ಸಮುದಾಯವನ್ನು ಎಸ್ಟಿ ಸಮುದಾಯಕ್ಕೆ ಸೇರಿಸುವುದಕ್ಕೆ ಅನುಕೂಲವಾಗುತ್ತಿತ್ತು. ಕುರುಬರ ಸಮುದಾಯವನ್ನು ಎಸ್ಟಿಗೆ ಸೇರಿಸುವ ಬಗ್ಗೆ ಪ್ರಧಾನಿ ಬಳಿ ನಿಯೋಗ ಕರೆದುಕೊಂಡು ಹೋಗುತ್ತೇನೆ ಎಂಬ ಹೇಳಿಕೆ ಕೊಟ್ಟಿದ್ದ ರಘುನಾಥ್ ಮಾಲ್ಕಪುರೆಯವರಿಗೆ ಕಾರ್ಯಕ್ರಮದಲ್ಲೇ ಟಾಂಗ್ ನೀಡಿ, ಕುರುಬ ಸಮುದಾಯವು ಚುನಾವಣೆಯಲ್ಲಿ ಕೈಕೊಟ್ಟ ಹಿನ್ನೆಲೆಯಲ್ಲಿ ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದರು.
Advertisement
ಈ ಮೊದಲು ಬಾಗಲಕೋಟೆಯಲ್ಲಿ ಯಾರೋ ಒಬ್ಬ ಹುಡುಗ ಕಪ್ಪು ಬಾವುಟ ತೋರಿಸಿ ಹಾಲುಮತವನ್ನ ಎಸ್ಟಿಗೆ ಸೇರಿಸಲು ನೀವೇ ಅಡ್ಡಿ ಎಂದು ಪ್ರತಿಭಟಿಸಿದ್ದ. ನಾನು ಯಾವಾಗಲು ಸಾಮಾಜಿಕ ನ್ಯಾಯದ ಪರ ಇದ್ದೇನೆ. ಅವನೆಲ್ಲಿಂದ ಬಂದನೋ ಗೊತ್ತಿಲ್ಲ. ಮಾಹಿತಿ ಪ್ರಕಾರ ಅವನು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ನವನೆಂದು ತಿಳಿಯಿತು. ಈ ವೇಳೆ ವೇರ್ ಇಸ್ ದಿ ರಾಯಣ್ಣ ಬ್ರಿಗೇಡ್ ಮಿಸ್ಟರ್ ವೆಂಕಟೇಶ್ ಮೂರ್ತಿ? ಎಂದು ಮಾಜಿ ಬಿಬಿಎಂಪಿ ಮೇಯರ್ ವೆಂಕಟೇಶ್ ಮೂರ್ತಿಯನ್ನ ಕೆಣಕಿ, ಈಶ್ವರಪ್ಪನವರ ಅನುಪಸ್ಥಿತಿಯಲ್ಲಿ ಅವರ ಮೇಲೆ ವಾಗ್ದಾಳಿ ನಡೆಸಿದ ಅವರು, ರಾಯಣ್ಣ ಬ್ರಿಗೇಡ್ ಹೊಟ್ಟೆಪಾಡಿಗೆ ಮಾಡಿದ್ದು. ರಾಯಣ್ಣ ಬ್ರಿಗೇಡ್ ಅಂತ ಯಾರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ನನ್ನ ಜೀವನದಲ್ಲಿ ಯಾವತ್ತೂ ಯಾರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿಲ್ಲ ಎಂದರು.
ನನಗೆ ಮೆಡಿಕಲ್ ನಲ್ಲಿ ಸೀಟ್ ಸಿಗಲಿಲ್ಲವೆಂದು ಲಾ ಮಾಡಿ ರಾಜಕಾರಣಕ್ಕೆ ಬಂದೆ, ಒಂದು ವೇಳೆ ಮೆಡಿಕಲ್ ಸೀಟ್ ಸಿಕ್ಕಿದ್ದರೆ, ನಾನು ಮುಖ್ಯಮಂತ್ರಿಯಾಗುತ್ತಿರಲಿಲ್ಲ. ಪ್ರತಿಭಾವಂತ ವಿದ್ಯಾರ್ಥಿಗಳು ರಾಜಕಾರಣಕ್ಕೆ ಬರೋದು ಬೇಡ. ನೀವೆಲ್ಲಾ ಕೆಎಎಸ್, ಐಎಎಸ್ ಹಾಗೂ ವಿಜ್ಞಾನಿಗಳಾಗಬೇಕು. ನಿಮಗೆ ಉಚಿತ ಬಸ್‍ಪಾಸ್ ನೀಡುವ ಕುರಿತು ಹಿಂದಿನ ಬಜೆಟ್‍ನಲ್ಲಿ ನಾನು ಘೋಷಣೆ ಮಾಡಿದ್ದೆ. ಅದನ್ನು ಖಂಡಿತವಾಗಿಯೂ ನೆರವೇರಿಸುತ್ತೇನೆ. ಈ ಕುರಿತು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸುತ್ತೇನೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ನನ್ನ ಜೀವನಾನುಭವದ ಮೇಲೆ ವಿದ್ಯಾಸಿರಿ, ಅನ್ನಭಾಗ್ಯದಂತ ಯೋಜನೆಗಳನ್ನು ಜಾರಿಗೆ ತಂದೆ. ಎಲ್ಲಾ ಬಡವರಿಗೆ ಹಾಗೂ ಎಲ್ಲಾ ಹಿಂದುಳಿದ ವರ್ಗದ ಮಕ್ಕಳಿಗೆ ಇದರಿಂದ ಉಪಯೋಗವಾಗಿದೆ. ಆದರೂ ಸಹ ನನ್ನನ್ನು ಆ ಜಾತಿ ಪರ, ಈ ಜಾತಿ ಪರ, ಅವನು ಆ ಜಾತಿ ಒಡೆದ, ಈ ಜಾತಿ ಒಡೆದ ಅಂತ ಹೇಳಿ ನನ್ನನ್ನು ಸೋಲಿಸಿ ಬಿಟ್ಟರು. ಸಾಮಾಜಿಕ ನ್ಯಾಯ ಎತ್ತಿಹಿಡಿದಿದ್ದ ನನ್ನ ಜೊತೆ ಯಾರೂ ನಿಲ್ಲಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಈ ವೇಳೆ ಅಭಿಮಾನಿಯೊಬ್ಬ ನೀವು ಪ್ರಧಾನಿಯಾಗಬೇಕು ಎಂದು ಕೂಗಿದಾಗ, ಏ.. ಸುಮ್ಮನಿರು ಮಾರಾಯ ಹಾಗೆಲ್ಲಾ ಹೇಳಿ ವೈರಿಗಳನ್ನ ಹುಟ್ಟುಹಾಕಬೇಡ. ಜಾಸ್ತಿ ಮಾತನಾಡಿದಷ್ಟು ವೈರಿಗಳು ಜಾಸ್ತಿ ಆಗ್ತಾರೆ. ವೈರಿಗಳು ಜಾಸ್ತಿ ಆಗಿ ಯಾಮಾರಿದ್ರೆ ನಮ್ಮನ್ನೇ ಬಲಿ ಹಾಕ್ತಾರೆ. ಅಲ್ಲದೇ ನಾನು ಏನೇ ಮಾತನಾಡಿದರೂ ಅಪಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಮಾತನಾಡಲೂ ಸಹ ಹೆದರಿಕೆ ಆಗುತ್ತದೆ. ನನ್ನನ್ನು ಹಿಂದು ವಿರೋಧಿಯಂದು ಕರೆದಿದ್ದಾರೆ. ಆದರೆ ನಾನು ಹಿಂದು ವಿರೋಧಿಯಲ್ಲ, ಎಲ್ಲರನ್ನೂ ನಾನು ಪ್ರೀತಿಸುತ್ತೇನೆ. ನಾನು ನೂರಕ್ಕೆ ನೂರರಷ್ಟು ಹಿಂದೂ ಎಂದು ತಿಳಿಸಿದರು.
ಸಮಾರಂಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ಕೆಲವರು ನನ್ನನ್ನು ತಾವೇ ಕಾಂಗ್ರೆಸ್‍ಗೆ ಕರೆದುಕೊಂಡೆ ಬಂದೆ ಎಂದು ಬೀಗುತ್ತಿದ್ದಾರೆ. ಆದರೆ ನನ್ನನ್ನು ಕಾಂಗ್ರೆಸ್‍ಗೆ ಕರೆತಂದವರು ಪಿರನ್ ಹಾಗು ಅಹ್ಮದ್ ಪಟೇಲ್. ಆವಾಗ ನನ್ನನ್ನು ಬನ್ನಿ ಬನ್ನಿ ಎಂದು ಕೆಲವರು ಮಾತನಾಡಿಸಿದರು, ಸುಳ್ಳು ಹೇಳೋದಕ್ಕೆ ಒಂದು ಇತಿಮಿತಿ ಇರಬೇಕು. ಇದರಿಂದಾಗಿ ಯಾವುದೇ ರಾಜಕೀಯ ಲಾಭವಾಗುವುದಿಲ್ಲ. ಜನರಿಗೆ ನನ್ನ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಲು ಹೇಳುತ್ತಾರೆ. ಇದರ ಬಗ್ಗೆ ಮತ್ತೊಂದು ದಿನ ಅವರ ಎದುರಿಗೆ ಮಾತನಾಡುತ್ತೇನೆ. ಸತ್ಯ ಹೇಳಲು ಭಯ ಏಕೆ? ನಾನು ಯಾರಿಗೂ ಹೆದರುವುದಿಲ್ಲ ಎಂದು ಗುಡುಗಿದರು.
ಸಿಎಂ ಸಿದ್ದರಾಮಯ್ಯನವರು ಸಂಗೊಳ್ಳಿ ರಾಯಣ್ಣ ಮತ್ತು ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಜ್ಯೋತಿ ಬೆಳಗುವುದರ ಮೂಲಕ ಸಮಾರಂಭವನ್ನು ಉದ್ಘಾಟನೆ ಮಾಡಿ, 10ನೇ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಸಮಾರಂಭದಲ್ಲಿ ಕುರುಬ ಸಮಾಜದ ನಾಯಕರುಗಳಾದ ಅರಣ್ಯ ಸಚಿವ ಶಂಕರ್, ಸಹಕಾರ ಸಚಿವ ಬಂಡೇಪ್ಪ ಕಾಶಂಪೂರ್, ಭೈರತಿ ಸುರೇಶ್, ಹೆಚ್.ಎಮ್ ರೇವಣ್ಣ ಹಾಗೂ ತಿಂಥಿಣಿ ಮಠದ ಸಿದ್ದರಾಮ ಸ್ವಾಮೀಜಿಯು ಭಾಗಿಯಾಗಿದ್ದರು. ಆದರೆ ಸಮಾರಂಭದಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹಾಗೂ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ದೂರ ಉಳಿದಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv