ಮಂಗಳೂರು: ನೆರೆಯ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ(Anantha Padmanabha Swamy Temple) ಕ್ಷೇತ್ರ ಪಾಲಕನಂತಿದ್ದ ಮೊಸಳೆ ʼಬಬಿಯಾʼ(Babiya) ತನ್ನ ದೀರ್ಘ ಬದುಕಿಗೆ ವಿದಾಯ ಹೇಳಿದೆ.
ಈ ಕ್ಷೇತ್ರ ಕೆರೆ ನೀರಿನ ಮಧ್ಯೆ ಇದ್ದು ಕೆರೆಯಲ್ಲಿ ವಾಸವಾಗಿದ್ದ ಬಬಿಯಾ “ದೇವರ ಮೊಸಳೆ” ಎಂದೇ ಪ್ರಸಿದ್ಧಿ ಪಡೆದಿತ್ತು. ಹಲವಾರು ವರ್ಷಗಳಿಂದ ದೇವಸ್ಥಾನದ ಕೆರೆಯಲ್ಲಿ(Lake) ಇರುತ್ತಿದ್ದ ಬಬಿಯಾಗೆ ಪ್ರತಿನಿತ್ಯದ ಪೂಜೆಯ ಬಳಿಕ ನೈವೇದ್ಯ ಅರ್ಪಿಸುವುದು ಇಲ್ಲಿನ ಸಂಪ್ರದಾಯ. ಕೆಲ ವರ್ಷದ ಹಿಂದೆ ಕೆರೆಯಿಂದ ಹೊರಬಂದ ಬಬಿಯಾ ದೇವಾಲಯದ ಬಳಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿತ್ತು.
Advertisement
Advertisement
ಹಲವಾರು ದೇವಸ್ಥಾನಗಳಲ್ಲಿ ದೇವರ ಆನೆ, ಬಸವ ಇತ್ಯಾದಿ ಪ್ರಾಣಿಗಳಿಗಳಿರುತ್ತದೆ. ಆದರೆ ಈ ದೇವಾಲದ ಕೆರೆಯ ನಡುವಿನಲ್ಲಿ ನೆಲೆಸಿರುವ ‘ಅನಂತಪದ್ಮಾನಾಭನಿಗೆ ಮೊಸಳೆ-ಬಬಿಯಾ’ ‘ಕಾವಲು ಕಾಯುವ ಕೆಲಸ’ ಮಾಡುತ್ತದೆ ಎನ್ನುವ ನಂಬಿಕೆ ಇತ್ತು. ವರ್ಷದ ಎಲ್ಲಾ ದಿನವೂ ಶುದ್ಧ ನೀರಿನಿಂದ ತುಂಬಿರುವ ಈ ಕೆರೆಯಲ್ಲಿ ಈ ಮೊಸಳೆಯೂ ಕೂಡ ಇಲ್ಲೇ ವಾಸವಾಗಿರುತ್ತದೆ. ದೇವರ ನೈವೇದ್ಯವೇ ಇದಕ್ಕೆ ನಿತ್ಯ ಆಹಾರ. ಬಬಿಯಾ ಈ ಕೆರೆಯಿಂದ ದೇವಾಲಯದಲ್ಲಿರುವ ದೊಡ್ಡ ಕೆರೆಗೆ ಮನುಷ್ಯರು ನಡೆದಾಡುವ ದಾರಿಯಲ್ಲೇ ಸಾಗುತ್ತಾ ಸ್ವಚ್ಚಂದವಾಗಿ ಜೀವನ ನಡೆಸುತ್ತಿತ್ತು. ಹಾಗೆಂದು ಇದುವರೆಗೂ ಯಾರಿಗೂ ನೋವನ್ನುಂಟು ಮಾಡಿದ ಘಟನೆಗಳೇ ಇಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
Advertisement
ಅನಂತಪುರ ಕ್ಷೇತ್ರದಲ್ಲಿರುವ ಈ ಮೊಸಳೆ ಹೆಚ್ಚಿನ ಸಂದರ್ಭದಲ್ಲಿ ದೇವಾಲಯದ ಎಡಬದಿಯಲ್ಲಿರುವ ಗುಹೆಯಲ್ಲಿ ಇರುತ್ತಿತ್ತು. ಮಧ್ಯಾಹ್ನ ದೇವಾಲಯದ ನೈವೇದ್ಯವನ್ನು ಇಟ್ಟು ಮೊಸಳೆಯನ್ನು ಕರೆಯಲಾಗುತ್ತಿತ್ತು. ಇದನ್ನೂ ಓದಿ: ಅನಂತಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಪ್ರವಚನದ ವೇಳೆ ಮೊಸಳೆ ಪ್ರತ್ಯಕ್ಷ
Advertisement
ದೇವಸ್ಥಾನ ಎಲ್ಲಿದೆ?
ಮಂಗಳೂರಿನಿಂದ ಸುಮಾರು 39 ಕಿ.ಮೀ ದೂರವಿರುವ ಕುಂಬ್ಳೆಯಿಂದ ಬದಿಯಡ್ಕ ಮಾರ್ಗವಾಗಿ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿ ಅನಂತಪುರ ದೇವಾಲಯವಿದೆ. ತಿರುವಂತಪುರದ ಅನಂತಪದ್ಮನಾಭ ದೇವಳಕ್ಕೆ ಇದು ಮೂಲ ಸ್ಥಾನವೆಂಬುದು ಪುರಾಣ ಕಥೆಗಳಲ್ಲಿ ಕಾಣಬಹುದು. ಮಾತ್ರವಲ್ಲದೆ, ಕೆರೆಯ ಬದಿಯಲ್ಲಿ ಒಂದು ಸುರಂಗ ಮಾರ್ಗವೂ ಇದ್ದು, ಈ ಸುರಂಗದ ಮೂಲಕ ತಿರುವನಂತಪುರದ ದೇವಸ್ಥಾನ ತಲುಪಬಹುದು ಎಂದು ಪ್ರತೀತಿ. ದೇವಸ್ಥಾನದಲ್ಲಿ ಸಾಮಾನ್ಯವಾಗಿ ವಿಗ್ರಹವು ಕಲ್ಲಿನಿಂದಲೋ, ಲೋಹದಿಂದಲೋ ಕೆತ್ತಲ್ಪಟ್ಟಿರುತ್ತದೆ. ಆದರೆ ಇಲ್ಲಿನ ದೇವರ ಮೂರ್ತಿಯು ಸಂಪೂರ್ಣವಾಗಿ ಆಯುರ್ವೇದದ ಗಿಡಮೂಲಿಕೆಗಳಿಂದ, ವಿವಿಧ ದ್ರವ್ಯಗಳ ಲೇಪನದಿಂದ ತಯಾರಿಸಿದ್ದಾಗಿದೆ. ಇದಕ್ಕೆ ‘ಕಡುಶರ್ಕರ ಪಾಕ’ದ ವಿಗ್ರಹ ಎಂದು ಹೆಸರಿದೆ.
ಈ ದೇವಾಲಯದ ಹತ್ತಿರದಲ್ಲಿ ಶ್ರೀ ಮಹಾಗಣಪತಿಯ ಗುಡಿಯ ಇದೆ. ಅಷ್ಟೇ ಅಲ್ಲದೇ ಪುರಾತನ ಕಾಲದ ತುಳುಶಾಸನ ಇದೆ. ಪ್ರಧಾನ ದೇವಾಲಯದ ಬದಿಯಲ್ಲಿಯೇ ಗೋಪಾಲ ಕೃಷ್ಣ, ಸ್ವಲ್ಪ ದೂರದಲ್ಲಿ ರಕ್ತೇಶ್ವರಿ ಗುಡಿಯನ್ನೂ ಕಾಣಬಹುದು. ಹಾಗೆಯೇ ಶ್ರೀ ವನಶಾಸ್ತಾರ ಗುಡಿಯೂ ಇದೆ. ಈ ಗುಡಿ ಬಳಿಯೇ ಇನ್ನೊಂದು ಸಣ್ಣ ಕೆರೆ ಕಾಣಬಹುದು.