ಮೈಸೂರು: ಜಿಲ್ಲೆಯ ಟಿ.ನರಸೀಪುರದ ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಮೂರು ದಿನಗಳ ಕಾಲ ನಡೆಯುವ ಕುಂಭಮೇಳಕ್ಕೆ ಬರದ ಸಿದ್ಧತೆ ನಡೆಯುತ್ತಿದೆ. 5 ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಭಕ್ತರು ಪುಣ್ಯಸ್ನಾನಕ್ಕೆ ಆಗಮಿಸುವ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದೆ. ದಕ್ಷಿಣ ಭಾರತದ ಹನ್ನೊಂದನೆಯ ಕುಂಭಮೇಳಕ್ಕೆ ದಿನಗಣನೆ ಶುರುವಾಗಿದ್ದು, ಸೇನಾ ಸಿಬ್ಬಂದಿಯಿಂದಲೂ ಕುಂಭಮೇಳಕ್ಕೆ ಸಾಥ್ ಸಿಕ್ಕಿದೆ.
ಕುಂಭಮೇಳ ಅಂದೊಡನೆ ನಮಗೆ ನೆನಪಿಗೆ ಬರೋದು ಉತ್ತರ ಭಾರತ. ಅಲ್ಲಿ ನಡೆಯುವ ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಆಗಮಿಸಿ ಹೇಗೆ ಪುಣ್ಯಸ್ನಾನ ಮಾಡುತ್ತಾರೋ ಅದೇ ರೀತಿಯಲ್ಲಿ ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ನಡೆಯುವ ಕುಂಭಮೇಳಕ್ಕೂ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪುಣ್ಯಸ್ನಾನ ಮಾಡುತ್ತಾರೆ. ಇಲ್ಲಿನ ಕಾವೇರಿ, ಕಪಿಲ, ಸ್ಪಟಿಕ ಸರೋವರ ಮೂರು ನದಿಗಳ ಸಂಗಮವಾಗುವ ಸ್ಥಳದಲ್ಲಿ ವಿಶೇಷ ಪೂಜೆ ಪುನಸ್ಕಾರಗಳ ಮೂಲಕ ಮಹಾಕುಂಭಮೇಳಕ್ಕೆ ಚಾಲನೆ ಸಿಗಲಿದೆ.
Advertisement
Advertisement
ಇದೇ ತಿಂಗಳ ಫೆ.17, 18, 19 ಈ ಮೂರು ದಿನಗಳ ಕಾಲ ತ್ರಿವೇಣಿ ಸಂಗಮದಲ್ಲಿ ಮಹಾಕುಂಭಮೇಳ ನಡೆಯಲಿದೆ. 1989 ರಿಂದ ನಡೆಸಿಕೊಂಡು ಬರುತ್ತಿರುವ ಈ ಕುಂಭಮೇಳಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ಬಾರಿ ಶ್ರೀವಿಳಂಬಿ ನಾಮ ಸಂವತ್ಸರದಲ್ಲಿ 11ನೇ ಕುಂಭಮೇಳ ನಡೆಯುತ್ತಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳು ನಡೆಯುತ್ತಿದೆ.
Advertisement
ಕಾವೇರಿ, ಕಪಿಲಾ ಹಾಗೂ ಸ್ಪಟಿಕ ಸರೋವರ ಇಲ್ಲಿ ಸಂಗಮವಾಗುವ ಹಿನ್ನೆಲೆಯಲ್ಲಿ ಅದೇ ಸ್ಥಳದಲ್ಲಿ ವಿಶೇಷ ಪೂಜೆಗೆ ಸಿದ್ಧತೆ ನಡೆಯುತ್ತಿದ್ದು, ಮರಳು ಹಾಗೂ ದಿಮ್ಮಿಗಳನ್ನ ಹಾಕಿ ಸೇನಾ ಸಿಬ್ಬಂದಿ ಸೇತುವೆ ನಿರ್ಮಾಣ ಮಾಡುತ್ತಿದ್ದಾರೆ. ನದಿಯ ಮಧ್ಯದಲ್ಲಿ ಸೇತುವೆ ನಿರ್ಮಿಸಿ ಯಾವುದೇ ಸಮಸ್ಯೆ ಆಗದಂತೆ ಎಚ್ಚರ ವಹಿಸಲಾಗಿದೆ. ಗುಂಜಾನರಸಿಂಹಸ್ವಾಮಿ ಹಾಗೂ ಅಗಸ್ಥ್ಯೇಶ್ವರ ದೇಗುಲದ ಮಧ್ಯಭಾಗದ ನದಿಯಲ್ಲಿ ಪೂಜೆ ನಡೆಯಲಿದ್ದು, ಅಲ್ಲಿಗೆ ಹೋಗಲು ಭಕ್ತರಿಗೆ ನದಿಯ ಮಧ್ಯದಲ್ಲಿ ದಾರಿ ಮಾಡಲಾಗಿದೆ ಎಂದು ಸ್ವಾಮೀಜಿ ಸೋಮನಾಥ ತಿಳಿಸಿದ್ದಾರೆ.
Advertisement
ನದಿಯ ಮಧ್ಯದಲ್ಲಿ ಸೇತುವೆ:
ಟಿ.ನರಸೀಪುರ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಐತಿಹಾಸಿಕ ಕುಂಭಮೇಳಕ್ಕೆ ಜಿಲ್ಲಾಡಳಿತ ಸಜ್ಜಾಗುತ್ತಿದೆ. ಈ ಬಾರಿಯ ಪ್ರಮುಖ ಆಕರ್ಷಣೆಯಾಗಿರುವ ತಾತ್ಕಾಲಿಕ ತೂಗು ಸೇತುವೆ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದೆ. ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ಸೋಪಾನ ಕಟ್ಟೆಯಿಂದ ಧಾರ್ಮಿಕ ಸಭೆ ನಡೆಯುವ ಸ್ಥಳದವರೆಗೆ ಕಪಿಲಾ ನದಿಗೆ ಅಡ್ಡಲಾಗಿ ಭಾರತೀಯ ಸೇನೆ ಯೋಧರು ಕಟ್ಟಿರುವ ತೂಗು ಸೇತುವೆ ಇದಾಗಿದೆ.
160 ಮೀಟರ್ ಉದ್ದದ 3 ಮೀಟರ್ ಅಗಲದ ತೂಗು ಸೇತುವೆಯನ್ನ ಸುಮಾರು 140 ಯೋಧರು ಶ್ರಮಿಸಿ ಮೂರು ದಿನಗಳಲ್ಲಿ ನಿರ್ಮಿಸಿದ್ದಾರೆ. ಜಿಲ್ಲಾಧಿಕಾರಿ ಅಭಿರಾಮ್. ಜಿ. ಶಂಕರ್ ಹಾಗೂ ಮೇಜರ್ ಜನರಲ್ ಕೆ.ಜೆ.ಬಾಬು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯೋಧರ ಕಾರ್ಯಕ್ಕೆ ಜಿಲ್ಲಾಧಿಕಾರಿಗಳು ಹ್ಯಾಟ್ಸಾಫ್ ಹೇಳಿದ್ದಾರೆ. ಬಳಿಕ ತೂಗು ಸೇತುವೆಯನ್ನ ಜಿಲ್ಲಾಡಳಿತದ ವಶಕ್ಕೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.
ಒಟ್ಟಿನಲ್ಲಿ 11ನೇ ಮಹಾಕುಂಭಮೇಳಕ್ಕೆ ಕ್ಷಣಗಣನೆ ಶುರುವಾಗಿದ್ದು, ಪ್ರತಿ ಹಂತದ ಸಿದ್ಧತೆಯನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv