ಬಳ್ಳಾರಿ: ಕುಮಾರಸ್ವಾಮಿ (HD Kumaraswamy), ಆರ್ ಆಶೋಕ್ (R Ashok) ಮುಖ್ಯಮಂತ್ರಿಯಾಗಲು ಕಾಯುತ್ತಿದ್ದಾರೆ. ಆದರೆ ಐದು ವರ್ಷ ನಾವೇ ಅಧಿಕಾರ ನಡೆಸುತ್ತೇವೆ. ನಮ್ಮನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಗುಡುಗಿದ್ದಾರೆ.
ಸಂಡೂರು ಉಪಚುನಾವಣೆಯಲ್ಲಿ (Sanduru By Election) ಅನ್ನಪೂರ್ಣ ತುಕಾರಾಂ ಜಯಗಳಿಸಿದ ಹಿನ್ನೆಲೆಯಲ್ಲಿ ಇಂದು ಸಂಡೂರಿನಲ್ಲಿ ಕಾಂಗ್ರೆಸ್ (Congress) ಅಭಿನಂದನಾ ಸಮಾವೇಶವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಜನರ ಆಶೀರ್ವಾದ ಇರುವವರೆಗೂ ನಮ್ಮನ್ನು ಬಗ್ಗಿಸಲು ಸಾಧ್ಯವಿಲ್ಲ, ಜಗ್ಗಿಸಲು ಸಾಧ್ಯವಿಲ್ಲ ಎಂದರು.
ಶಿಗ್ಗಾವಿ, ಚನ್ನಪಟ್ಟಣದಲ್ಲಿ ತಮ್ಮ ಮಕ್ಕಳನ್ನು ಅಭ್ಯರ್ಥಿ ಮಾಡಿ ನೂರಾರು ಕೋಟಿ ಖರ್ಚು ಮಾಡಿದರು. ಅವರು ಗೆದ್ದ ಕ್ಷೇತ್ರದಲ್ಲಿ ನಮ್ಮನ್ನು ಗೆಲ್ಲಿಸಿದ್ರು. ಮೊದಲು ಜನರ ಮನಸ್ಸು ಗೆಲ್ಲಿ, ಅಪಪ್ರಚಾರ ಮಾಡುವುದನ್ನು ಬಿಡಿ. ಮಾನ ಮರ್ಯದೆ ಇದ್ದರೆ ಸರ್ಕಾರದ ಜೊತೆಗೆ ಸಹಕರಿಸಿ. ಟೀಕೆ ಮಾಡಲು ಸುಳ್ಳು ಆರೋಪ, ಅಪಪ್ರಚಾರ ಮಾಡಬೇಡಿ ಎಂದು ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿದರು.
ವಕ್ಫ್ ಆಸ್ತಿ, ಮೂಡಾ ಬಗ್ಗೆ ಅನಗತ್ಯ ಅಪ್ರಚಾರ ಮಾಡಿದರು. ವಾಲ್ಮೀಕಿ ಹಗರಣದಲ್ಲಿ ಮಂತ್ರಿ, ಮುಖ್ಯಮಂತ್ರಿ ಪಾತ್ರ ಇದೆ ಎಂದು ದೂರಿದರು. ಮಹಾರಾಷ್ಟ್ರ ಚುನಾವಣೆಯಲ್ಲಿ ಕರ್ನಾಟಕದ ಹಣ ಬಳಸಿದೆ ಎಂದು ಸುಳ್ಳು ಹೇಳಿದರು. 2028ರವರೆಗೂ ಅಧಿಕಾರದಲ್ಲಿ ಇರುತ್ತೇವೆ. ಯಾವುದೇ ಗ್ಯಾರಂಟಿಯನ್ನು ಅಲ್ಲಿಯವರೆಗೂ ನಿಲ್ಲಿಸಲ್ಲ. 2028ರಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದು ಯೋಜನೆ ಮುಂದುವರೆಸುತ್ತೇವೆ. ಅಭಿವೃದ್ಧಿ ಕೆಲಸಕ್ಕೆ ದುಡ್ಡಿಲ್ಲ ಎನ್ನುವುದು ಸುಳ್ಳು ಎಂದು ಪ್ರತಿಪಕ್ಷಗಳಿಗೆ ಮಾತಿನಲ್ಲಿ ಚಾಟಿ ಬೀಸಿದರು. ಇದನ್ನೂ ಓದಿ: ತುಮಕೂರು| ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ವಿರುದ್ಧ ಹೋರಾಟ – ಗೃಹ ಸಚಿವರ ಮನೆಗೆ ಮುತ್ತಿಗೆ
ಅನ್ನಪೂರ್ಣಗೆ ನಿಮ್ಮ ಆಶೀರ್ವಾದ ಇರಲಿ ಎಂದು ಮನವಿ ಮಾಡಿದ್ದೆ. ಇಂದು ಸಂವಿಧಾನ ಉಳಿವಿಗೆ, ಪ್ರಜಾಪ್ರಭುತ್ವ ಉಳಿಯಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಬಿಜೆಪಿ ಬಡವರ ಪರವಾದ ಪಕ್ಷ ಅಲ್ಲ ಎಂದು ನಾನು ಮನವಿ ಮಾಡಿದ್ದೆ. ಧರ್ಮ, ಜಾತಿ ಇಲ್ಲದೆ 5 ಗ್ಯಾರಂಟಿ ಯೋಜನೆ ಜನರಿಗೆ ನೀಡಿದ್ದೇವೆ ಎಂದು ಹೇಳಿದರು.