ಮಂಡ್ಯ: ಚುನಾವಣೆ 5 ವರ್ಷಕ್ಕೊಮ್ಮೆ ಬರುತ್ತೆ, ಆದ್ರೆ ಸಿನಿಮಾ ತಿಂಗಳಿಗೊಂದು ಬರುತ್ತೆ. ಅವರ ಸಿನೆಮಾವನ್ನೇ ನೋಡದೇ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸಿಎಂ ಕುಮಾರಸ್ವಾಮಿ ಅಭಿಮಾನಿಗಳು ಬುದ್ಧಿ ಕಲಿಸುತ್ತಾರೆ ಅಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ವಿರುದ್ಧ ಜೆಡಿಎಸ್ ಮುಖಂಡ ನಲ್ಲಿಗೆರೆ ಬಾಲು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿನ ಅವರು, ಯಶ್ ಹಾಗೂ ದರ್ಶನ್ ಬಗ್ಗೆ ಮಾತನಾಡಿದರೆ ಅವರ ಅಭಿಮಾನಿಗಳು ರಾಜ್ಯಾದ್ಯಂತ ಉತ್ತರ ಕೊಡುತ್ತಾರೆ ಎಂಬ ಸುಮಲತಾ ಅಂಬರೀಶ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನಾಗಮಂಗಲದಲ್ಲಿ ಜೆಡಿಎಸ್ ಸಭೆ ಆರಂಭಕ್ಕೂ ಮುನ್ನ ಸುಮಲತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರಾಜ್ಯಾದ್ಯಂತ ದೇವೇಗೌಡರು, ಕುಮಾರಸ್ವಾಮಿ ಅಭಿಮಾನಿಗಳಿದ್ದಾರೆ. ನಾವು ದುಡ್ಡುಕೊಟ್ಟು ನಟರ ಸಿನಿಮಾ ನೋಡುತ್ತಿದ್ದೇವೆ. ಇನ್ಮುಂದೆ ಈ ಭಾಗದಲ್ಲಿ ನಾವು ದರ್ಶನ್, ಯಶ್ ಸಿನಿಮಾವನ್ನು ನೋಡಲ್ಲ. ನಾವು ನೋಡದೇ ಇದ್ದರೆ ಅವರ ಸಿನಿಮಾ ಹೇಗೆ ಓಡುತ್ತದೆ ನೋಡೋಣ. ನಾವು ದುಡ್ಡು ಕೊಟ್ಟು ಸಿನಿಮಾ ನೋಡಿದ್ದರಿಂದ ಅವರು ಈಗ ರೀತಿ ಮಾತನಾಡುತ್ತಿದ್ದಾರೆ ಅಂತ ಕಿಡಿಕಾರಿದರು.
ಚುನಾವಣೆ 5 ವರ್ಷಕ್ಕೊಮ್ಮೆ ಬರುತ್ತದೆ. ಅವರ ಸಿನಿಮಾ ತಿಂಗಳಿಗೊಂದು ಬರುತ್ತದೆ. ಅವರ ಸಿನೆಮಾವನ್ನೇ ನೋಡದೇ ದೇವೇಗೌಡರು, ಕುಮಾರಸ್ವಾಮಿ ಅಭಿಮಾನಿಗಳು ಬುದ್ಧಿ ಕಲಿಸುತ್ತಾರೆ. ಸುಮಲತಾ ಅವರು ತನ್ನ ಇನ್ನೊಂದು ಮುಖ ನೋಡಿಲ್ಲ ಅಂದಿದ್ದರು. ಆದಷ್ಟು ಬೇಗ ಅವರ ಇನ್ನೊಂದು ಮುಖ ತೋರಿಸಲಿ. ಪಕ್ಷದ ವರಿಷ್ಠರು ಅವರ ವಿರುದ್ಧ ಮಾತನಾಡಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಹೀಗಾಗಿ ಸುಮ್ಮನಿದ್ದೇವೆ. ಸಮಯ ಬಂದಾಗ ನಾವೇ ಉತ್ತರ ಕೊಡುತ್ತೇವೆ ಎಂದು ಸುಮಲತಾ ವಿರುದ್ಧ ಹರಿಹಾಯ್ದರು.