ಬೆಂಗಳೂರು : ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಅವರು ಹೇಳಿರುವಂತೆ ದೇವದಾರಿ ಗಣಿಗಾರಿಕೆಗಾಗಿ ಕುದುರೆಮುಖ ಕಬ್ಬಿಣದ ಅದಿರು ಕಂಪನಿ (Kudremukh Iron Ore Company) ಅರಣ್ಯ ಇಲಾಖೆಗೆ 500 ಕೋಟಿ ರೂ. ಪಾವತಿಸಿಲ್ಲ ಎಂದು ಅರಣ್ಯ,ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ (Eshwar Khandre) ಸ್ಪಷ್ಟಪಡಿಸಿದ್ದಾರೆ.
ವಿಕಾಸಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕುದುರೆಮುಖದಲ್ಲಿ ಗಣಿಗಾರಿಕೆ ನಡೆಸಿದ ಕೆಐಒಸಿಎಲ್ ಪರಿಸರಕ್ಕೆ ಮಾಡಿರುವ ಹಾನಿಯ ಮೊತ್ತ ಸೇರಿದಂತೆ ಇಲಾಖೆಗೆ ಸುಮಾರು 1,400 ಕೋಟಿ ರೂಪಾಯಿ ಬಾಕಿ ಪಾವತಿಸಬೇಕು ಎಂದು ಹೇಳಿದರು. ಅಕ್ರಮವಾಗಿ ಲಕ್ಯಾ ಜಲಾಶಯದ ಎತ್ತರ ಹೆಚ್ಚಿಸಿ, ಅರಣ್ಯ ಮುಳುಗಡೆ ಮಾಡಿದ್ದಕ್ಕಾಗಿ 119.12 ಕೋಟಿ, ಗಣಿಗಾರಿಕೆಗಾಗಿ ಹೊಸ ಭೂಮಿ ಅಗೆದಿದ್ದಕ್ಕಾಗಿ 19.88 ಕೋಟಿ ರೂ.ಸೇರಿದಂತೆ 142.96 ಕೋಟಿ ರೂ.ಗಳನ್ನು ಪರೋಕ್ಷ ಮತ್ತು ಪ್ರತ್ಯಕ್ಷ ಪರಿಸರ ಹಾನಿಗಾಗಿ ಕಂಪನಿ ಪಾವತಿಸಬೇಕು.ಇದಲ್ಲದೆ ಮಹಾ ಲೆಕ್ಕಪರಿಶೋಧಕರು ಉಲ್ಲೇಖಿಸಿರುವಂತೆ ನಿವ್ವಳ ಪ್ರಸ್ತುವ ಮೌಲ್ಯ (ಎನ್.ಪಿ.ವಿ.) ಮೊತ್ತ, ಬಡ್ಡಿ ಸೇರಿ 1349 ಕೋಟಿ ರೂ. ಪಾವತಿಸಬೇಕು ಎಂದು ಖಂಡ್ರೆ ವಿವರ ನೀಡಿದರು. ಇದನ್ನೂ ಓದಿ: ವಕ್ಫ್ ಜಾಗದಲ್ಲಿ ಹೊಸ ಸಂಸತ್ ಭವನ ನಿರ್ಮಾಣ: ಬದ್ರುದ್ದೀನ್ ಅಜ್ಮಲ್ ವಿವಾದ
Advertisement
Advertisement
ಇದರ ಜೊತೆಗೆ ಕೆಐಒಸಿಎಲ್ ತನ್ನ ಸ್ವಂತ ಭೂಮಿ 114.30 ಹೆಕ್ಟೇರ್, ಸರ್ಕಾರದ ಕಂದಾಯ ಭೂಮಿ 1220.03 ಹೆಕ್ಟೇರ್ ಸೇರಿ ಒಟ್ಟು 1334.33 ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆಗೆ ಹಿಂತಿರುಗಿಸಬೇಕು. ಈ ಪೈಕಿ 670 ಹೆಕ್ಟೇರ್ ಪ್ರದೇಶವನ್ನು ಅಂಕೋಲ- ಹುಬ್ಬಳ್ಳಿ ರೈಲು ಮಾರ್ಗಕ್ಕೆ ಗುರುತಿಸಲಾಗಿದೆ ಎಂದೂ ತಿಳಿಸಿದರು. ಕುದುರೇಮುಖ ಕಬ್ಬಿಣದ ಅದಿರು ಕಂಪನಿ ಈ ಹಿಂದೆ ಕುದುರೇಮುಖ ಅರಣ್ಯ ಪ್ರದೇಶದಲ್ಲಿ ನಡೆಸಿದ ಗಣಿಗಾರಿಕೆಯ ವೇಳೆ ಪರಿಸರಕ್ಕೆ ಉಂಟು ಮಾಡಿರುವ ಹಾನಿ ವಿಪರೀತವಾಗಿದೆ. ಈ ಬಗ್ಗೆ ನ್ಯಾಯಾಲಯದ ತೀರ್ಪುಗಳಲ್ಲಿ, ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ವರದಿಯಲ್ಲಿ ಹಾಗೂ 13ನೇ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ನೀಡಿರುವ 3ನೇ ವರದಿಯಲ್ಲೂ ವಿವರವಾಗಿ ತಿಳಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: 2025-26ರ ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ – ಎಷ್ಟು ಏರಿಕೆಯಾಗಿದೆ?
Advertisement
Advertisement
ಕಂಪನಿ ಗಣಿ ಉತ್ಖನನ ಆರಂಭಿಸಿದ ವೇಳೆ 27%ರಷ್ಟು ಮಣ್ಣನ್ನು ಲಕ್ಯಾ ಡ್ಯಾಂಗೆ ಸುರಿದಿದ್ದು ಪ್ರಸ್ತುತ ಅಲ್ಲಿ 150 ಮಿಲಿಯನ್ ಟನ್ ಮಣ್ಣು ಸಂಗ್ರಹವಾಗಿದೆ. ಅಣೆಕಟ್ಟೆಯಲ್ಲಿ ಇನ್ನೂ ಹೆಚ್ಚಿನ ಮಣ್ಣು ಹಾಕಲು ಅನಧಿಕೃತವಾಗಿ ಕಂಪನಿ ಲಕ್ಯಾ ಡ್ಯಾಂ ಎತ್ತರವನ್ನು ಹೆಚ್ಚಿಸಿತ್ತು. ಇದರಿಂದ 340 ಹೆಕ್ಟೇರ್ ಅರಣ್ಯ ಭೂಮಿಗೆ ಹಾನಿಯಾಗಿದೆ ಎಂದೂ ಹೇಳಿದರು. ಪರಿಷ್ಕರಿಸಿದ ಅದಿರನ್ನು ಮಂಗಳೂರು ಬಂದರಿಗೆ ಸಾಗಿಸಲು ಪೈಪ್ ಲೈನ್ ಅಳವಡಿಸಲಾಗಿದೆ. ಈ ರೀತಿ ಅರಣ್ಯೇತರ ಉದ್ದೇಶದ ಬಳಕೆಗೆ ಕಂಪನಿ ಸೂಕ್ತ ಅನುಮತಿ ಪಡೆದಿಲ್ಲ. ಜೊತೆಗೆ ನಿರಂತರ ವಿದ್ಯುತ್ ಪಡೆಯಲು ವಿದ್ಯುತ್ ಮಾರ್ಗವನ್ನು ಅರಣ್ಯದೊಳಗೆ ಹಾಕಿಕೊಂಡಿದೆ. ಇಂತಹ ಹತ್ತು ಹಲವು ಪರಿಸರ ಹಾನಿಯನ್ನು ಕಂಪನಿ ಮಾಡಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಎನ್‌ಎಂಡಿಸಿಯಿಂದ ಅದಿರು ಖರೀದಿಸಬಹುದು ಮತ್ತು ಖಾಸಗಿಯವರಿಂದಲೂ ಖರೀದಿಸಬಹುದು. ಪರಿಸರ ಉಳಿಸುವ ಜವಾಬ್ದಾರಿ ಇಲಾಖೆಯ ಮೇಲಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಎಚ್.ಡಿ. ಕುಮಾರಸ್ವಾಮಿ ಅವರು ಸುಖಾ ಸುಮ್ಮನೆ ರಾಜಕೀಯ ಕಾರಣ ಎಂದು ಆರೋಪಿಸುತ್ತಿದ್ದಾರೆ ಎಂದರು.