ಬೆಂಗಳೂರು: ಪಾಸ್ ಇದ್ದಿದ್ದರಿಂದ ಟಿಕೆಟ್ ತೆಗೆದುಕೊಳ್ಳಲು ನಿರಾಕರಿಸಿದ ವಿದ್ಯಾರ್ಥಿನಿಯನ್ನು ಕಂಡಕ್ಟರ್ ಚಲಿಸುತ್ತಿದ್ದ ಬಸ್ಸಿನಿಂದ ಹೊರಗೆ ತಳ್ಳಿರುವ ಅಮಾನವೀಯ ಘಟನೆ ಕೋಣನಕುಂಟೆ ಬಳಿ ನಡೆದಿದೆ.
ಯಲಚೇನಹಳ್ಳಿಯ ಜ್ಯೋತಿ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಕನಕಪುರ ಪಟ್ಟಣದ 16 ವರ್ಷದ ಭೂಮಿಕಾ(17) ತೀವ್ರವಾಗಿ ಗಾಯಗೊಂಡಿದ್ದಾಳೆ. ಕಾಲೇಜು ಮುಗಿಸಿಕೊಂಡು ಮಧ್ಯಾಹ್ನ 3 ಗಂಟೆಗೆ ಊರಿಗೆ ಹೋಗಲು ಕೆಎಸ್ಆರ್‌ಟಿಸಿ ಬಸ್ ಹತ್ತಿದಾಗ ಈ ಘಟನೆ ನಡೆದಿದೆ.
Advertisement
ನವೆಂಬರ್ 11ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿದ್ಯಾರ್ಥಿನಿ ಕನಕಪುರದ ಬಸ್ ಹತ್ತಿದ್ದು, ಬಸ್ ಪಾಸ್ ಇದ್ದಿದ್ದರಿಂದ ಆಕೆ ಟಿಕೆಟ್ ತೆಗೆದುಕೊಳ್ಳಲು ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟುಗೊಂಡ ಕಂಡಕ್ಟರ್ ಶಿವಶಂಕರ್, ವಿದ್ಯಾರ್ಥಿನಿಯನ್ನು ಚಲಿಸುತ್ತಿರುವ ಬಸ್ಸಿನಿಂದ ಹೊರಕ್ಕೆ ತಳ್ಳಿದ್ದಾನೆ.
Advertisement
Advertisement
ಈ ಬಸ್ಸಿನಲ್ಲಿ ವಿದ್ಯಾರ್ಥಿ ಪಾಸ್ ನಡೆಯುವುದಿಲ್ಲ ಎಂದು ಕಂಡಕ್ಟರ್ ಹೇಳಿದರು. ಹೀಗಾಗಿ ನಾನು ಮುಂದಿನ ನಿಲ್ದಾಣದಲ್ಲಿ ಇಳಿಯುವುದಾಗಿ ಹೇಳಿದೆ. ಆದರೆ ಅಲ್ಲೇ ಇಳಿಯುವಂತೆ ಕಂಡಕ್ಟರ್ ಒತ್ತಾಯಿಸಿದರು. ಅಷ್ಟರಲ್ಲಿ ಬಸ್ ಚಲಿಸಲಾರಂಭಿಸಿತು. ಆದರೂ ಕಂಡಕ್ಟರ್ ನನ್ನನ್ನು ಬಲವಂತವಾಗಿ ಹೊರದಬ್ಬಿದರು ಎಂದು ವಿದ್ಯಾರ್ಥಿನಿ ಭೂಮಿಕಾ ನಡೆದ ಘಟನೆಯನ್ನು ವಿವರಿಸಿದ್ದಾಳೆ.
Advertisement
ಬಸ್ಸಿನಿಂದ ಬಿದ್ದ ಗಾಯಗೊಂಡ ಭೂಮಿಕಾಳನ್ನು ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ಘಟನೆ ಕುರಿತು ವಿದ್ಯಾರ್ಥಿನಿ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಹಾರೋಹಳ್ಳಿ ಡಿಪೋಗೆ ಸೇರಿದ ಬಸ್ ಇದಾಗಿದೆ.
ಆರೋಪಿ ವಿರುದ್ಧ ಸೆಕ್ಷನ್ 325(ಸ್ವಯಂ ಪ್ರೇರಣೆಯಿಂದ ತೀವ್ರ ನೋವುಂಟು ಮಾಡುವುದು) ಅಡಿ ಪ್ರಕರಣ ದಾಖಲಿಸಿದ್ದೇವೆ. ತನಿಖೆ ಪ್ರಗತಿಯಲ್ಲಿದೆ ಎಂದು ಕೋಣನಕುಂಟೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕುರಿತು ಕೆಎಸ್ಆರ್‌ಟಿಸಿ ಎಂಡಿ ಶಿವಯೋಗಿ ಕಳಸದ ಪ್ರತಿಕ್ರಿಯಿಸಿ, ಅಮಾನವೀಯವಾಗಿ ವರ್ತಿಸಿದ ಆರೋಪಿಯನ್ನು ಈಗಾಗಲೇ ಅಮಾನತು ಮಾಡಲಾಗಿದೆ. ವಿದ್ಯಾರ್ಥಿನಿಯನ್ನು ಬಸ್ಸಿನಿಂದ ಹೊರದಬ್ಬಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಂಡಕ್ಟರ್ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲ ಸಾರಿಗೆ ಸಿಬ್ಬಂದಿಗೆ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಲು ಮಾರ್ಗಸೂಚಿ ಹಾಗೂ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನಡೆದುಕೊಳ್ಳಲು ಸೂಚನೆ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.