– ಫೆ.12 ರಂದು ಸರ್ಕಾರದ ಹಂತದಲ್ಲಿ ಹೈವೋಲ್ಟೇಜ್ ಮೀಟಿಂಗ್
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ (RCB) ಪಂದ್ಯಾವಳಿ ಆಡಿಸಬೇಕೆನ್ನುವ ಕ್ರಿಕೆಟ್ ಅಭಿಮಾನಿಗಳ ಪ್ರಾರ್ಥನೆ ಕೈಗೂಡುವ ಕಾಲ ಹತ್ತಿರ ಬಂದಂತಿದೆ. ಬುಧವಾರ ಆರ್‌ಸಿಬಿ ಅಭಿಮಾನಿಗಳಿಗೆ ಸರ್ಕಾರ ಗುಡ್ ನ್ಯೂಸ್ ಕೊಡುತ್ತಾ ಅನ್ನೋ ಕುತೂಹಲ ಮೂಡಿದೆ. ಅಂದು ಸರ್ಕಾರದ ಹಂತದಲ್ಲಿ ಹೈವೋಲ್ಟೇಜ್ ಮೀಟಿಂಗ್ ನಡೆಯಲಿದ್ದು, ಎಲ್ಲರ ನಿರೀಕ್ಷೆ ಗರಿಗೆದರಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಆರ್‌ಸಿಬಿ ಮ್ಯಾಚ್ ಆಡಿಸುವ ಬಗ್ಗೆ ನಡೆಯುತ್ತಿದ್ದ ಹಗ್ಗಜಗ್ಗಾಟ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಂತಿದೆ. ಮುಂದಿನ ಐಪಿಎಲ್ ಹೊತ್ತಿಗೆ ಆರ್‌ಸಿಬಿ ಪಂದ್ಯಾವಳಿಗಳನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಆಡಿಸಬೇಕೆಂಬ ನಿಟ್ಟಿನಲ್ಲಿ ಕೆಎಸ್‌ಸಿಎ (KSCA) ಹಾಗೂ ಆರ್‌ಸಿಬಿ ಜಂಟಿ ಕಸರತ್ತು ಮುಂದುವರಿದಿದೆ. ಈ ಬೆನ್ನಲ್ಲೇ ಇಂದು ಗೃಹ ಸಚಿವ ಪರಮೇಶ್ವರ್ (G.Parameshwara) ಅವರನ್ನು ಕೆಎಸ್‌ಸಿಎ ಮತ್ತು ಆರ್‌ಸಿಬಿ ನಿಯೋಗ ಭೇಟಿ ಮಾಡಿ ಚರ್ಚೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಆರ್‌ಸಿಬಿ ಪಂದ್ಯ ಆಡಿಸಲು ನಮ್ಮ ಕಡೆಯಿಂದ ಕ್ಲಿಯರೆನ್ಸ್ ಸಿಕ್ಕಿಲ್ಲ: ಪರಮೇಶ್ವರ್
ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಆರ್‌ಸಿಬಿಯ ರಾಜೇಶ್ ಮೆನನ್ ನೇತೃತ್ವದ ನಿಯೋಗ ಇಂದು ಬೆಳಗ್ಗೆ ಗೃಹ ಸಚಿವರ ಜತೆ ಸಮಾಲೋಚನೆ ನಡೆಸಿತು. ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯಾವಳಿ ಆಡಿಸುವ ಸಂಬಂಧ ಚರ್ಚೆ ನಡೆಸಲಾಯ್ತು. ನ್ಯಾ.ಕುನ್ಹಾ ಸಮಿತಿಯ ಶಿಫಾರಸು ಅಳವಡಿಸಿಕೊಂಡಿರುವ ಬಗ್ಗೆ ಭರವಸೆ ಕೊಟ್ಟ ನಿಯೋಗ ಆದಷ್ಟು ಬೇಗ ಪಂದ್ಯಾವಳಿಗಳನ್ನು ಆಡಿಸಲು ಮನವಿ ಮಾಡಿತು. ಬಳಿಕ ಮಾತಾಡಿದ ವೆಂಕಟೇಶ್ ಪ್ರಸಾದ್, ಸದ್ಯದಲ್ಲೇ ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ 12 ರಂದು ಸರ್ಕಾರದ ಹಂತದಲ್ಲಿ ಸಭೆ ನಡೆಸಿ ಪಂದ್ಯಾವಳಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಗೃಹ ಸಚಿವರು ಇದೇ ವೇಳೆ ಭರವಸೆ ಕೊಟ್ಟರು. ಜಿಬಿಎ ಹಾಗೂ ನಗರ ಪೊಲೀಸ್ ಆಯುಕ್ತರೊಳಗೊಂಡ ಸಮಿತಿ ಸದಸ್ಯರು, ಆರ್‌ಸಿಬಿ ಪ್ರಮುಖರ ಸಭೆಯಲ್ಲಿದ್ದು, ಪಂದ್ಯ ನಡೆಸುವ ಬಗ್ಗೆ ಚರ್ಚೆ ನಡೆಸಲಾಗುವುದು. ಬಳಿಕ ಸಿಎಂ ಜತೆಗೂ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳೋದಾಗಿ ಪರಮೇಶ್ವರ್ ತಿಳಿಸಿದರು. ಇದನ್ನೂ ಓದಿ: ಭಾರತದ ಜೊತೆ ಪಂದ್ಯವಾಡಲು 3 ಷರತ್ತು ಮುಂದಿಟ್ಟ ಪಾಕ್!
ಕಾಲ್ತುಳಿತದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿರಾಸೆಯ ಕಾರ್ಮೋಡ ಕವಿದಿತ್ತು. ಈಗ ಮತ್ತೆ ಆಸೆ ಚಿಗುರಿದ್ದು, ಚಿನ್ನಸ್ವಾಮಿ ಸ್ಟೇಡಿಯಂ ಮತ್ತೆ ಕ್ರಿಕೆಟ್ ವೈಭವಕ್ಕೆ ವೇದಿಕೆ ಆಗುವ ಸಂದರ್ಭ ಬಂದಂತಿದೆ. ಸರ್ಕಾರ ಹಟ ಬಿಡುತ್ತಾ? ಅಭಿಮಾನಿಗಳ ಕೋರಿಕೆಗೆ ಮಣಿಯುತ್ತಾ!?


