-ಸಿದ್ದರಾಮಯ್ಯ ಮೊದಲು ಕುಂಕುಮ ಹಚ್ಚಿದ್ರೆ ಮೈಮೇಲೆ ದೆವ್ವ ಬಂದ ರೀತಿ ಆಡೋರು
ಶಿವಮೊಗ್ಗ: ಮುಡಾ ಹಗರಣದಲ್ಲಿ ಸಿಲುಕಿದ ಸಿಎಂಗೆ ಚಾಮುಂಡೇಶ್ವರಿ, ಸವದತ್ತಿ ಎಲ್ಲಮ್ಮ ರಕ್ಷಣೆ ಕೊಡಬೇಕಾ? ಮುಸ್ಲಿಮರು, ಗೂಂಡಾಗಳ ಪರ ಇದ್ದರೆ ಚಾಮುಂಡೇಶ್ವರಿ ಹಾಗೂ ಎಲ್ಲಮ್ಮ ಹೇಗೆ ಕಾಪಾಡುತ್ತಾರೆ? ಚಾಮುಂಡೇಶ್ವರಿ ಮಹಿಷಾಸುರನ ಸಂಹಾರ ಮಾಡಿದ ರೀತಿ ನೀವು ಸಂಹಾರ ಆಗ್ತೀರಾ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (K.S Eshwarappa) ಕಿಡಿಕಾರಿದ್ದಾರೆ.
ನಗರದಲ್ಲಿ (Shivamogga) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ದೇವಾಲಯಗಳಿಗೆ ಭೇಟಿ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ (Siddaramaiah) ಇತ್ತೀಚಿಗೆ ದೇವಸ್ಥಾನಕ್ಕೆ ಹೋಗಿ ಕುಂಕುಮ ಹಚ್ಚಿಕೊಳ್ಳುತ್ತಿದ್ದಾರೆ. ಮೊದಲು ಕುಂಕುಮ ಹಚ್ಚಲು ಹೋದರೆ ಮೈಮೇಲೆ ದೆವ್ವ ಬಂದ ರೀತಿ ಆಡೋರು ಎಂದು ವ್ಯಂಗ್ಯವಾಡಿದ್ದಾರೆ.
ಜಾತಿ ಜನಗಣತಿ ಅ.18ಕ್ಕೆ ಮಂಡಿಸುತ್ತೇನೆ ಎಂದಿದ್ದರು. ಇದೀಗ 18ಕ್ಕೆ ಆಗಲ್ಲ ಮುಂದೂಡುತ್ತೇನೆ ಎಂದಿದ್ದಾರೆ. 9 ವರ್ಷದ ಹಿಂದೆಯೇ ಜಾತಿಜನಗಣತಿ ಮಂಡಿಸುತ್ತೇನೆ ಎಂದಿದ್ದರು. 9 ವರ್ಷ ಆದರೂ ಮಂಡಿಸಲು ಆಗಿಲ್ಲ. ಇದೀಗ ಅ.25ಕ್ಕೆ ಮಂಡನೆ ಮಾಡ್ತೀನಿ ಎಂದಿದ್ದಾರೆ. ನೋಡೋಣ 9 ವರ್ಷ ಕಾಯ್ದಿದ್ದೇವೆ. ಇನ್ನೊಂದು ವಾರ ಕಾಯೋದಕ್ಕೆ ಆಗಲ್ವಾ ಎಂದು ಹೇಳಿದ್ದಾರೆ.
ಮುಡಾ ಹಗರಣ ಡೈವರ್ಟ್ ಮಾಡಲು ಜಾತಿ ಜನಗಣತಿ ವರದಿ ಪ್ರಸ್ತಾಪ ಮಾಡಿದ್ದರೆ ಅದನ್ನು ಜನ ಸಹಿಸೋದಿಲ್ಲ. ವರದಿ ಇನ್ನೂ ಬಹಿರಂಗ ಆಗಿಲ್ಲ ಈಗಲೇ ಕೆಲವರು ವಿರೋಧ ಮಾಡ್ತಿದ್ದಾರೆ. ಮೊದಲು ವರದಿ ಬಿಡುಗಡೆ ಆಗಲಿ. ಅದರಲ್ಲಿ ಇರುವ ಸರಿ ತಪ್ಪು ಬಗ್ಗೆ ಚರ್ಚೆ ಆಗಲಿ ಎಂದಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ವಿಚಾರವಾಗಿ, ಪೊಲೀಸರ ರಕ್ಷಣೆಯನ್ನು ಸರ್ಕಾರ ಮಾಡಲ್ಲ ಎಂದರೆ ಸರ್ಕಾರ ಬದುಕಿದೆಯಾ? ಸತ್ತಿದೆಯಾ? ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದೆ. ಸಿದ್ದರಾಮಯ್ಯ, ಡಿಕೆಶಿ ಸೇರಿ ಗೂಂಡಾಗಳ ರಕ್ಷಣೆಗೆ ಹೊರಟ್ಟಿದ್ದಾರೆ. ಇದು ಗೂಂಡಾ ಸರ್ಕಾರನಾ? ಈ ನಡೆ ಸರಿಯಲ್ಲ, ಹೀಗಾಗಿಯೇ ಇಡೀ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗ್ತಿದೆ ಎಂದಿದ್ದಾರೆ.