– ರಮೇಶ್ ಜಾರಕಿಹೊಳಿಗೆ ಸಚಿವ ಈಶ್ವರಪ್ಪ ತಪರಾಕಿ
ಶಿವಮೊಗ್ಗ: ಸಿದ್ದರಾಮಯ್ಯನವರು ಈಗಲೂ ನಮ್ಮ ನಾಯಕರು ಎಂದು ಹೇಳಿಕೊಂಡಿದ್ದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ,
ನಗರದ ಶುಭಮಂಗಳ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಜಿಲ್ಲಾ ಸಮಿತಿ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ತಾಯಿ ಇದ್ದ ಹಾಗೆ. ಇಲ್ಲಿಗೆ ಬಂದವರು ನಮ್ಮ ಸಂಸ್ಕೃತಿಯನ್ನು ಮೆಚ್ಚಿ ಇರಬೇಕಾಗುತ್ತದೆ. ಈ ರೀತಿ ಹೇಳಿದರೆ ತಾಯಿಗೆ ಮಾಡುವ ದ್ರೋಹವಾಗುತ್ತದೆ. ಹೊಸದಾಗಿ ಪಕ್ಷಕ್ಕೆ ಬಂದವರು ಪಕ್ಷದ ವಿಚಾರ ಮತ್ತು ಸಿದ್ಧಾಂತವನ್ನು ಒಪ್ಪಿ ನಡೆಯಬೇಕು ಎಂದು ಕಿವಿ ಮಾತು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನಮ್ಮ ನಾಯಕರು. ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದು ಶಾಸಕರಾದವರು ಇಂದಿಗೂ ಸಿದ್ದರಾಮಯ್ಯ ನಮ್ಮ ನಾಯಕರು ಎಂದು ಹೇಳಿಕೊಳ್ಳುತ್ತಿದ್ದು, ಸಂಘಟನಾತ್ಮಕ ವಿಷಯದಲ್ಲಿ ಇದನ್ನು ಒಪ್ಪಲಾಗದು. ಬಿಜೆಪಿ ಪಕ್ಷ ಕೂಡ ಇದನ್ನು ಒಪ್ಪುವುದಿಲ್ಲ ಎಂದು ತಿಳಿಸಿದರು.
ಮನೆ ಬದಲಾಗಿರಬಹುದು, ಆದರೆ ನಾಯಕರಲ್ಲ ಎಂದು ಶಾಸಕರು ಹೇಳಿದ್ದಾರೆ. ಪಕ್ಷದ ವಿಚಾರ ಮತ್ತು ಸಿದ್ಧಾಂತವನ್ನು ಒಪ್ಪಿ ನಡೆಯಬೇಕು. ಪಕ್ಷವನ್ನು ನಾವು ತಾಯಿಯಂತೆ ನೋಡುತ್ತೇವೆ. ಪಕ್ಷದ ನಾಯಕರೇ ನಮ್ಮ ನಾಯಕರು. ವಿವಿಧ ವಿಚಾರ ಹಾಗೂ ಹಿಂದುತ್ವವನ್ನು ಬೇರೆ ಪಕ್ಷದ ನಾಯಕರು ಒಪ್ಪುತ್ತಾರಾ ಎಂದು ಇದೇ ವೇಳೆ ಈಶ್ವರಪ್ಪ ಖಾರವಾಗಿಯೇ ಪ್ರಶ್ನೆ ಮಾಡಿದರು.