ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್ಎಸ್ (KRS) ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿತ ಕಂಡಿದ್ದು, ಕಾವೇರಿ ಕೊಳ್ಳದ ರೈತರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಜಲಾಶಯದ ನೀರಿನ ಮಟ್ಟ ಮತ್ತೆ 102 ಅಡಿಗೆ ಕುಸಿದಿದ್ದು, ಅರ್ಧದಷ್ಟು ಸಂಗ್ರಹ ಮಾತ್ರ ಉಳಿದುಕೊಂಡಿದೆ.
ಅರ್ಧ ಸಾಮರ್ಥ್ಯಕ್ಕೆ ಕುಸಿದ ಡ್ಯಾಂ
124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್ಎಸ್ನಲ್ಲಿ ಸದ್ಯ ನೀರಿನ ಮಟ್ಟ 102.30 ಅಡಿಗೆ ಇಳಿಕೆಯಾಗಿದೆ. ಒಟ್ಟು 49.452 ಟಿಎಂಸಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿರುವ ಜಲಾಶಯದಲ್ಲಿ, ಪ್ರಸ್ತುತ ಕೇವಲ 24.667 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಅಂದರೆ ಜಲಾಶಯದ ಅರ್ಧದಷ್ಟು ಭಾಗ ಬರಿದಾಗಿದ್ದು, ಒಟ್ಟು ಸಾಮರ್ಥ್ಯದ ಅರ್ಧ ಭಾಗದಷ್ಟು ನೀರು ಮಾತ್ರ ಸಂಗ್ರಹವಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕೆಆರ್ಎಸ್ ಬಳಿ ನಡೆಯುವ ಕಾವೇರಿ ಆರತಿ ಮುಂದೂಡಿಕೆ
ಒಳಹರಿವು ಕ್ಷೀಣ, ಹೊರಹರಿವು ಜಾಸ್ತಿ
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಬರುತ್ತಿರುವ ನೀರಿನ ಪ್ರಮಾಣ ತೀರಾ ಕುಸಿದಿದೆ. ಸದ್ಯ ಡ್ಯಾಂಗೆ ಕೇವಲ 590 ಕ್ಯೂಸೆಕ್ ಒಳಹರಿವು ಮಾತ್ರ ದಾಖಲಾಗುತ್ತಿದೆ. ಆದರೆ, ನದಿಗೆ ಮತ್ತು ನಾಲೆಗಳಿಗೆ ಸೇರಿ ಬರೋಬ್ಬರಿ 3,141 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಒಳಹರಿವಿಗಿಂತ ಹೊರಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ದಿನದಿಂದ ದಿನಕ್ಕೆ ನೀರಿನ ಮಟ್ಟ ವೇಗವಾಗಿ ಇಳಿಯುತ್ತಿದೆ.
ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲದೆ, ರಾಜಧಾನಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ನಗರ-ಪಟ್ಟಣಗಳ ಕುಡಿಯುವ ನೀರಿಗೂ ತತ್ವಾರ ಎದುರಾಗುವ ಭೀತಿ ಇದೆ. ಇದನ್ನೂ ಓದಿ: ಮನ್ಮುಲ್ ಹಾಲಿನ ಪುಡಿ ಕಲಬೆರಕೆ ಹಗರಣ – ಸಿಬಿಐ ತನಿಖೆಗೆ ಆಗ್ರಹಿಸಿ ಬಿಜೆಪಿ ಬೃಹತ್ ಪ್ರತಿಭಟನೆ

