ಮಂಡ್ಯ: 100 ವರ್ಷಗಳು ಸಮೀಪಿಸುತ್ತಿರುವ ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಅಣೆಕಟ್ಟು (KRS Dam) ಸುಭದ್ರವಾಗಿದೆ. ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸಚಿವ ಚಲುವರಾಯಸ್ವಾಮಿ (N Chaluvarayaswamy) ಹೇಳಿದ್ದಾರೆ.
ಈ ಕುರಿತು ಮಂಡ್ಯದಲ್ಲಿ (Mandya) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಬಿ ಡ್ಯಾಂನ ಕ್ರಸ್ಟ್ ಗೇಟ್ ಕಿತ್ತು ಬಂದಿರುವ ಬೆನ್ನಲ್ಲೇ ರಾಜ್ಯದ ಎಲ್ಲಾ ಡ್ಯಾಂಗಳ ನಿರ್ವಹಣೆ ಮತ್ತು ಸ್ಥಿತಿಗತಿ ಹರಿಯಲು ಮುಖ್ಯಮಂತ್ರಿಗಳು ಸಮಿತಿಯನ್ನು ರಚನೆ ಮಾಡಿದ್ದಾರೆ. ಈಗಾಗಲೇ ನಾವು ಕೆಆರ್‌ಎಸ್ ಡ್ಯಾಂ ವಿಚಾರವಾಗಿ ಒಂದು ಸಮಿತಿ ಮಾಡಿದ್ದು, ಆ ಸಮಿತಿ ಈಗಾಗಲೇ ನಮಗೆ ವರದಿ ನೀಡಿದೆ. 100 ವರ್ಷ ಸಮೀಪಿಸುತ್ತಿರುವ ಕೆಆರ್‌ಎಸ್ ಡ್ಯಾಂ ಸುಭದ್ರ ಸ್ಥಿತಿಯಲ್ಲಿದೆ. ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಈಗ ನೀರು ಹರಿಸಿದ್ರೂ ಅಕ್ಟೋಬರ್ ವೇಳೆಗೆ ಡ್ಯಾಂ ತುಂಬುವ ಸಾಧ್ಯತೆಯಿದೆ – ಸಿದ್ದರಾಮಯ್ಯ ವಿಶ್ವಾಸ
ಇನ್ನೂ ಟಿಬಿ ಡ್ಯಾಂನ ಕ್ರಸ್ಟ್ ಗೇಟ್ ಕಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನನಗೆ ಇದರ ಸಂಪೂರ್ಣ ಮಾಹಿತಿ ಇಲ್ಲ. ಆರೋಗ್ಯದ ವ್ಯತ್ಯಾಸದಿಂದ ಯಾರ ಬಳಿಯೂ ಮಾತನಾಡಿಲ್ಲ. ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ. ರಿಪೋರ್ಟ್ ಬಂದ ನಂತರ ಮಾತನಾಡುತ್ತೇನೆ. ಸಮಿತಿ ರಿಪೋರ್ಟ್ ಬರೋವರೆಗೂ ಎಲ್ಲರೂ ಸುಮ್ಮನಿದ್ದರೆ ಒಳ್ಳೆಯದು. ಇದರಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲ ಹಳದಿ ಅಂತಾರಲ್ಲ ಹಾಗೆ ಆಗಿದೆ. ಬಿಜೆಪಿಯವರಿಗೆ ದೇಶವೆಲ್ಲ ಹಳದಿಯಾಗಿ ಕಾಣುತ್ತಿದೆ. ಇದು ರಾಜಕೀಯ ಮಾಡುವ ಸಂದರ್ಭವಲ್ಲ ಎಂದರು. ಇದನ್ನೂ ಓದಿ: ಡ್ಯಾಂ ವಿಚಾರದಲ್ಲಿ ರಾಜಕೀಯ ಬೆರಸಬಾರದು – ಸಚಿವ ಪ್ರಿಯಾಂಕ್ ಖರ್ಗೆ